ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 22ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಶಾನ್ಯ ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ತಂಪಿನ ಅನುಭವ ನೀಡಿದೆ. ಗುರುವಾರವೂ ನಗರದ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 20ರಿಂದ 22ರವರೆಗೆ ಕರಾವಳಿಯ ಹಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ರಾಯಚೂರು, ಗದಗ, ಕೊಪ್ಪಳ, ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಕ್ಟೋಬರ್ 16ರಿಂದ 22ರವರೆಗೆ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನಲ್ಲಿ ಮುಂದುವರಿಯಲಿದೆ ವರ್ಷಧಾರೆ:
ಮೈಸೂರು, ಚಾಮರಾಜನಗರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 17ರಿಂದ 22ರವರೆಗೆ ಹಲವು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.



