ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ.ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ತಮ್ಮ ಕೊಠಡಿಯಲ್ಲೇ ಡಾ. ಸಿ.ಜೆ. ರಾಯ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಗುಂಡಿನ ಶಬ್ದ ಕೇಳಿಸದೆ ಸುಮಾರು 20 ನಿಮಿಷಗಳ ಕಾಲ ಈ ಘಟನೆ ಯಾರಿಗೂ ತಿಳಿದಿರಲಿಲ್ಲ.
ರಾಯ್ ಅವರ ಚೇಂಬರ್ ಸಂಪೂರ್ಣವಾಗಿ ಸೌಂಡ್ ಪ್ರೂಫ್ ಆಗಿದ್ದರಿಂದ ಗುಂಡಿನ ಶಬ್ದ ಹೊರಗೆ ಕೇಳಿಸಿಲ್ಲ ಎನ್ನಲಾಗಿದೆ. ಕೊಠಡಿಯ ಒಳಗಿರುವ ಧ್ವನಿಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಲಾಗಿತ್ತು. ಇದರಿಂದಾಗಿ ಆತ್ಮಹತ್ಯೆ ನಡೆದರೂ ಕಚೇರಿಯ ಸಿಬ್ಬಂದಿಗೆ ತಕ್ಷಣ ಮಾಹಿತಿ ಸಿಗಲಿಲ್ಲ.
ಬಹಳ ಸಮಯವಾದರೂ ರಾಯ್ ತಮ್ಮ ಕೊಠಡಿಯಿಂದ ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಕರೆದು ನೋಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಅನುಮಾನಗೊಂಡು ಕುಟುಂಬದವರ ಅನುಮತಿ ಪಡೆದು ಭದ್ರತಾ ಸಿಬ್ಬಂದಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.
ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರು ಎನ್ನಲಾಗಿದೆ. ಜ.30ರಂದು ಆದಾಯ ತೆರಿಗೆ ಇಲಾಖೆ ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ನಡೆಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆಗೆ ರಾಯ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಹೇಳಿಕೆ ನೀಡಲು ಕಚೇರಿಗೆ ಆಗಮಿಸಿದ್ದರು. ಅಲ್ಲಿಂದ ವಾಪಸ್ ಬಂದ ಬಳಿಕ ರಾಯ್ ತಮ್ಮ ಕ್ಯಾಬಿನ್‌ಗೆ ತೆರಳಿದ್ದು, ಮತ್ತೆ ಹೊರಗೆ ಬಂದಿಲ್ಲ.
ನಂತರ ಜೋಸೆಫ್ ಅವರು ಕ್ಯಾಬಿನ್‌ಗೆ ಪ್ರವೇಶಿಸಲು ಯತ್ನಿಸಿದಾಗ, ರಾಯ್ ಅವರ ಸೂಚನೆಯಂತೆ ಯಾರನ್ನೂ ಒಳಗೆ ಬಿಡಬಾರದು ಎಂದು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಬಾಗಿಲನ್ನು ಬಲವಂತವಾಗಿ ಒಡೆದು ಒಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೇರಳ ಮೂಲದ ಸಿ.ಜೆ. ರಾಯ್ 2005ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿದ್ದರು. ಈ ಸಂಸ್ಥೆ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ವಸತಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಹೋಟೆಲ್, ರೆಸಾರ್ಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.



