ನವದೆಹಲಿ: ಸ್ನೇಹ ಬೆಳೆಸಲು ನಿರಾಕರಿಸಿದ್ದಕ್ಕೆ ಮಾಡೆಲ್ ಒಬ್ಬರನ್ನು ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿರುವ ಆರೋಪ ದೆಹಲಿಯ ತಿಲಕ್ ನಗರದಲ್ಲಿ ಕೇಳಿಬಂದಿದೆ.
ಮೃತ ಯುವತಿಯನ್ನು 21 ವರ್ಷದ ಮುಸ್ಕಾನ್ ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಆರೋಪ ಜಿಮ್ ಟ್ರೇನರ್ ಇಮ್ರಾನ್ ಮೇಲಿದೆ.
ಘಟನೆ ನಡೆದ ಸಂದರ್ಭದಲ್ಲಿ ಮುಸ್ಕಾನ್ ಮನೆಯಲ್ಲಿ ಒಬ್ಬರೇ ಇದ್ದರು. ಮುಸ್ಕಾನ್ ಜಿಮ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಮ್ರಾನ್ ಪರಿಚಯವಾಗಿದ್ದ ಎನ್ನಲಾಗಿದೆ. ಪರಿಚಯವಾದ ಬಳಿಕ ಇಮ್ರಾನ್ ನಿರಂತರವಾಗಿ ಆಕೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಮುಸ್ಕಾನ್ ಸ್ನೇಹ ಬೆಳೆಸಲು ನಿರಾಕರಿಸಿದ್ದಳು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಹತ್ಯೆಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.



