ಬೆಂಗಳೂರು: ನಗರದ ಸ್ಪಾ ಮತ್ತು ಮಸಾಜ್ ಪಾರ್ಲರ್ಗಳ ಮೇಲೆ ಬೆಂಗಳೂರು ಪೊಲೀಸರು ದಿಢೀರ್ ಪರಿಶೀಲನೆ ನಡೆಸಿದ್ದಾರೆ.
ಪೂರ್ವ ವಿಭಾಗದ 11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 191 ಸ್ಪಾ ಹಾಗೂ ಮಸಾಜ್ ಪಾರ್ಲರ್ಗಳನ್ನು ತಪಾಸಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿರುವ 16 ಪಾರ್ಲರ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಪೂರ್ವ ವಿಭಾಗದ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಅವರ ಸೂಚನೆ ಮೇರೆಗೆ ಈ ವಿಶೇಷ ಪರಿಶೀಲನಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
191 ಪಾರ್ಲರ್ಗಳ ಪರಿಶೀಲನೆ:
ಪೊಲೀಸರು ಪರಿಶೀಲನೆ ವೇಳೆ ಸ್ಪಾ ಮತ್ತು ಮಸಾಜ್ ಪಾರ್ಲರ್ಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಪಾರ್ಲರ್ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಗುರುತಿನ ಚೀಟಿ ಮತ್ತು ವಿಳಾಸದ ದಾಖಲೆಗಳನ್ನು ತಪಾಸಣೆ ನಡೆಸಿದ್ದಾರೆ.
ಗ್ರಾಹಕರ ವಿವರಗಳನ್ನು ದಾಖಲಿಸುವ ಲೆಡ್ಜರ್ ಪುಸ್ತಕಗಳನ್ನೂ ಕೂಲಂಕಷವಾಗಿ ಪರಿಶೀಲಿಸಲಾಗಿದೆ.
ನಿಯಮ ಉಲ್ಲಂಘಿಸಿದವರಿಗೆ ನೋಟಿಸ್:
ಪರಿಶೀಲನೆ ವೇಳೆ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ 16 ಸ್ಪಾ ಮತ್ತು ಮಸಾಜ್ ಪಾರ್ಲರ್ಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನಿಯಮ ಉಲ್ಲಂಘಿಸುವ ಪಾರ್ಲರ್ಗಳ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸ್ಪಾ ಮತ್ತು ಮಸಾಜ್ ಪಾರ್ಲರ್ಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.









