ಮಂಡ್ಯ: ಪ್ರೀತಿಸುವಂತೆ ಒತ್ತಾಯಿಸಿ, ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ.
ಚಂದಗಾಲು ಗ್ರಾಮದ ಸಿಂಚನಾ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ರೌಡಿಶೀಟರ್ ಹೃತಿಕ್ ಗೌಡ ಅಲಿಯಾಸ್ ಚಿಂಟು ಹಾಗೂ ಆತನ ಸಹಚರರು ಮನೆಗೆ ನುಗ್ಗಿ ದೌರ್ಜನ್ಯ ನಡೆಸಿದ್ದೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರೀತಿಸುವಂತೆ ನಿರಂತರ ಕಿರುಕುಳ ಆರೋಪ:
ಪಕ್ಕದ ಗ್ರಾಮದ ಯುವಕನೊಬ್ಬ ಸಿಂಚನಾಳಿಗೆ ತನ್ನನ್ನು ಪ್ರೀತಿಸುವಂತೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ ವಿದ್ಯಾಭ್ಯಾಸದ ಕಡೆ ಗಮನಹರಿಸಲು ಬಯಸಿದ್ದ ಬಾಲಕಿ ಆತನ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಳು. ಈ ವಿಚಾರವನ್ನು ಬಾಲಕಿಯ ಪೋಷಕರು ಯುವಕನ ಕುಟುಂಬದ ಗಮನಕ್ಕೂ ತಂದಿದ್ದರು ಎಂದು ತಿಳಿದುಬಂದಿದೆ.
ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ ಆರೋಪ:
ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕ, ರೌಡಿಶೀಟರ್ ಹೃತಿಕ್ ಗೌಡ ಅಲಿಯಾಸ್ ಚಿಂಟು ಹಾಗೂ ಆತನ ಸಹಚರರ ನೆರವು ಪಡೆದಿದ್ದಾನೆ ಎನ್ನಲಾಗಿದೆ. ಬಳಿಕ ಚಿಂಟು ಸೇರಿದಂತೆ ನಾಲ್ವರು ಬಾಲಕಿಯ ಮನೆಗೆ ನುಗ್ಗಿ, ತಮ್ಮ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾಗುವಂತೆ ಒತ್ತಾಯಿಸಿ ಬಾಲಕಿ ಮತ್ತು ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಲಾಟೆಯ ಸದ್ದು ಕೇಳಿ ಸ್ಥಳೀಯರು ಮನೆಗೆ ಧಾವಿಸುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ:
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಸಿಂಚನಾ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









