ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 7 ಸಾವಿರ ಆಸ್ತಿಗಳನ್ನು ಹರಾಜು ಹಾಕಲು ಪ್ರಾಧಿಕಾರ ನಿರ್ಧರಿಸಿದೆ.
ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಈಗಾಗಲೇ ಹಲವು ಬಾರಿ ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಆದರೆ ನೋಟಿಸ್‌ಗಳ ಬಳಿಕವೂ ತೆರಿಗೆ ಪಾವತಿ ಆಗದ ಹಿನ್ನೆಲೆ, ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡುವ ಆದೇಶವನ್ನು ಜಿಬಿಎ ಹೊರಡಿಸಿದೆ. ಜಪ್ತಿ ಆದೇಶಗಳ ನಂತರವೂ ತೆರಿಗೆ ಬಾಕಿ ಪಾವತಿಸದಿದ್ದಲ್ಲಿ, ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ ಆಸ್ತಿ ಮಾಲೀಕರಿಗೆ ಇದು ಕೊನೆಯ ಎಚ್ಚರಿಕೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.



