ಬೆಂಗಳೂರು: ವಿಶೇಷ ಅಧಿವೇಶನದ ಗದ್ದಲದ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್‌ನ SC, ST ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಖಾಸಗಿ ಹೋಟೆಲಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆದಿರುವುದು ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೀಡಿದ್ದ ಸೂಚನೆಯಂತೆ ಈ ಸಭೆ ನಡೆದಿದೆ ಎನ್ನಲಾಗುತ್ತಿದ್ದು, ಪಕ್ಷದ ಒಳಗಿನ ಅಸಮಾಧಾನ ಈಗ ಬಹಿರಂಗ ರೂಪ ಪಡೆಯುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಸಭೆಯಲ್ಲಿ ಸಚಿವರಾದ ಪರಮೇಶ್ವರ್, ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿ 20ಕ್ಕೂ ಹೆಚ್ಚು SC, ST ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸಿದ್ದರು.
SCSP–TSP ಅನುದಾನ ಬಳಕೆ ವಿಚಾರವೇ ಸಭೆಯ ಪ್ರಮುಖ ಅಜೆಂಡಾಗಿತ್ತು. ಈ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸ್ತಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಬಜೆಟ್‌ನಲ್ಲಿ SC, ST ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಬೇಕು ಹಾಗೂ SCSP–TSP ಹಣ ಯಾವ ಉದ್ದೇಶಕ್ಕೆ ಮೀಸಲಾಗಿದೆಯೋ ಅದಕ್ಕೆ ಮಾತ್ರ ಬಳಸಬೇಕು ಎಂಬ ಒಗ್ಗಟ್ಟಿನ ಧ್ವನಿ ಸಭೆಯಲ್ಲಿ ಕೇಳಿಬಂದಿದೆ.
ಇದೇ ವೇಳೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ನೇರವಾಗಿ ಮಂಡಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ, ದಲಿತ ಸಿಎಂ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸುವ ಬಗ್ಗೆ ಸಮುದಾಯದ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಸಚಿವ ಸಂಪುಟ ಸಭೆಯಲ್ಲೇ SCSP–TSP ಅನುದಾನ ಹಂಚಿಕೆ ವಿಚಾರವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದರು. “SCSP–TSP ಹಣ ಯಾಕೆ ನೀಡಿಲ್ಲ? ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದ ಪ್ರಸಂಗ ಇನ್ನೂ ತಾಜಾ. ಆ ಘಟನೆಯ ಬೆನ್ನಲ್ಲೇ ಈಗ ಈ ಸಭೆ ನಡೆದಿರುವುದು ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಬಿರುಕು ಮೂಡಿಸಿದೆ.



