ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ ನಡೆದ ವಿಚಾರಣೆಗೆ ಸ್ವತಃ ಹಾಜರಾದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಖುದ್ದಾಗಿ ವಾದ ಮಂಡಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಜನರನ್ನು ಗುರಿಯಾಗಿಸಿಕೊಂಡಿದೆ. ಈ ವಿಚಾರದಲ್ಲಿ ಎಲ್ಲೂ ನ್ಯಾಯ ಸಿಗದ ಕಾರಣ ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಈ ಮೂಲಕ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಸ್ವತಃ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದರು.
ಬಂಗಾಳದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಮತ್ತು ಅದರ ಪರಿಣಾಮವಾಗಿ ಜನರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ತಡೆಹಿಡಿಯಬೇಕು ಎಂದು ಕೋರಿ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಅವರು ತಮ್ಮ ವಕೀಲರ ತಂಡದೊಂದಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ಪೀಠದ ಮುಂದೆ ಹಾಜರಾದರು.
ರವೀಂದ್ರನಾಥ್ ಟ್ಯಾಗೋರ್ ಅವರ “ಎಲ್ಲವೂ ಮುಗಿದಾಗ ನಮಗೆ ನ್ಯಾಯ ಸಿಗುವುದಿಲ್ಲ, ನ್ಯಾಯವು ಮುಚ್ಚಿದ ಬಾಗಿಲಿನ ಹಿಂದೆ ಅಳುತ್ತಿದೆ” ಎಂಬ ಮಾತನ್ನು ಉಲ್ಲೇಖಿಸಿ ವಾದ ಆರಂಭಿಸಿದ ಮಮತಾ ಬ್ಯಾನರ್ಜಿ, ಚುನಾವಣಾ ಹೊತ್ತಲ್ಲೇ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿರುವ ಚುನಾವಣಾ ಆಯೋಗ ಬಂಗಾಳವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಅಸ್ಸಾಂ, ಮೇಘಾಲಯ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಎಸ್ಐಆರ್ ಯಾಕೆ ನಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಬಂಗಾಳದಲ್ಲಿ ಬಿಜೆಪಿ ರಾಜ್ಯಗಳ ವೀಕ್ಷಕರನ್ನು ನೇಮಿಸಿ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಮಮತಾ, ಇದು ಕಟಾವು ಮತ್ತು ಸುಗ್ಗಿಯ ಕಾಲವಾಗಿದ್ದು, ಜನರು ದುಡಿಮೆಯಲ್ಲಿ ತೊಡಗಿರುವಾಗಲೇ ಮತಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ದಾಖಲೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದರು. ಸಣ್ಣ ಪುಟ್ಟ ಲೋಪ ಕಂಡುಬಂದರೂ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದ್ದು, ಇದರಿಂದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿದರು.
ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಇಸಿಐ ‘ವಾಟ್ಸಾಪ್ ಆಯೋಗ’ ಆಗಿದೆ ಎಂದು ವ್ಯಂಗ್ಯವಾಡಿದರು. ಕಳೆದ 24 ವರ್ಷಗಳಿಂದ ಸಮಗ್ರ ಮತಪಟ್ಟಿ ಪರಿಷ್ಕರಣೆ ನಡೆಸಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವಾಗಲೇ ಈ ಪ್ರಕ್ರಿಯೆ ನಡೆಸುವ ಆತುರ ಯಾಕೆ ಎಂದು ಪ್ರಶ್ನಿಸಿದರು. ಸಾಮಾನ್ಯವಾಗಿ ಎರಡು ವರ್ಷ ಬೇಕಾಗುವ ಈ ಪ್ರಕ್ರಿಯೆಯನ್ನು ಕೇವಲ ಮೂರು ತಿಂಗಳಲ್ಲಿ ಮುಗಿಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಈ ಒತ್ತಡದಿಂದಾಗಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಬಿಎಲ್ಒಗಳು ಸಾವಿಗೀಡಾಗಿದ್ದಾರೆ. ಇದಕ್ಕೆ ನೇರ ಹೊಣೆ ಚುನಾವಣಾ ಆಯೋಗದ್ದೇ ಎಂದು ಮಮತಾ ಆರೋಪಿಸಿದರು. ಮೊದಲ ಹಂತದಲ್ಲಿ 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಎರಡನೇ ಹಂತದಲ್ಲಿ 1.30 ಕೋಟಿ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮತದಾರರಿಗೆ ಫಾರ್ಮ್-6 ಮೂಲಕ ಹೆಸರು ಸೇರಿಸಿಕೊಳ್ಳಲು ಅವಕಾಶ ನೀಡಿಲ್ಲ. ಇಂತಹ ಕ್ರಮ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ನಡೆದಿಲ್ಲ ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.



