ಬೆಂಗಳೂರು: ಅಕ್ರಮ ವಲಸಿಗರ ಪತ್ತೆ ಹಾಗೂ ಪರಿಶೀಲನೆಗಾಗಿ ಬೆಂಗಳೂರು ನಗರ ಪೊಲೀಸರು ಕೈಗೊಂಡಿರುವ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ 105 ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಮೂರು ವಿಭಾಗಗಳಲ್ಲಿ ಅಕ್ರಮ ವಲಸಿಗರ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಒಟ್ಟು 2,944 ಮಂದಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 105 ಮಂದಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಒಟ್ಟು 1,909 ಮಂದಿಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ 43 ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ.
ಇನ್ನು ವೈಟ್‌ಫೀಲ್ಡ್ ವಿಭಾಗದಲ್ಲಿ 1,035 ಮಂದಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, 62 ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾದ ಒಟ್ಟು 105 ಮಂದಿಯ ಮಾಹಿತಿಯನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ನೀಡಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಾಗಿ ಅವರನ್ನು ವಲಸಿಗರ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ರಮ ವಲಸಿಗರ ಪತ್ತೆ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿಯಲಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



