ಹಂಪಿ: 14ರಿಂದ 16ನೇ ಶತಮಾನದವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಾಗೂ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆ ಹೊಂದಿರುವ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಮಗ್ರ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಬೃಹತ್ ಯೋಜನೆ ರೂಪಿಸಿದೆ.

ಹೇಮಕೂಟ ಬೆಟ್ಟದ ಮೇಲಿರುವ ಜೈನ ದೇವಾಲಯಗಳು, ಸಿಂಗನಾಯಕರಹಳ್ಳಿಯ ಸರಸ್ವತಿ ದೇವಾಲಯ ಸೇರಿದಂತೆ ಹಂಪಿಯ ಪ್ರಮುಖ ಪಾರಂಪರಿಕ ಸ್ಮಾರಕಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಸಂರಕ್ಷಣಾ ಯೋಜನೆಗೆ ₹38 ಕೋಟಿ ಅನುದಾನ
ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಸಾಂಸ್ಕೃತಿಕ ನಿಧಿ ಅಡಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಒಟ್ಟು 38 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಸಿಎಸ್ಆರ್ ನಿಧಿ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಮೂಲಕ ಹಣ ಕ್ರೋಡೀಕರಿಸಲಾಗುತ್ತದೆ. ಈ ಪೈಕಿ ಸುಮಾರು 19 ಕೋಟಿ ರೂ. ಅನುದಾನ ಎಂಪಿಎಲ್ಎಡಿಎಸ್ ಮೂಲಕ ಲಭ್ಯವಾಗಲಿದೆ.
ಸ್ಮಾರಕಗಳ ಸ್ಥಿತಿಗತಿ ಪರಿಶೀಲನೆಗೆ ತಜ್ಞ ವಾಸ್ತುಶಿಲ್ಪಿ ನೇಮಕ
ಸಂರಕ್ಷಣಾ ಕಾರ್ಯಗಳಿಗೆ ತಾಂತ್ರಿಕ ಸ್ಪಷ್ಟತೆ ನೀಡುವ ಉದ್ದೇಶದಿಂದ ಕೇಂದ್ರ ಸಚಿವಾಲಯ ಶೀಘ್ರದಲ್ಲೇ ಪಾರಂಪರಿಕ ಸಂರಕ್ಷಣಾ ವಾಸ್ತುಶಿಲ್ಪಿಯನ್ನು ನೇಮಕ ಮಾಡಲಿದೆ. ಈ ತಜ್ಞರು ಸ್ಮಾರಕಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸಂರಕ್ಷಣಾ ಯೋಜನೆ ಹಾಗೂ ಅಗತ್ಯ ತಾಂತ್ರಿಕ ದಾಖಲಾತಿಗಳನ್ನು ಒಳಗೊಂಡ ವಿಸ್ತೃತ ಯೋಜನಾ ವರದಿಯನ್ನು ಹಂತ ಹಂತವಾಗಿ ಸಿದ್ಧಪಡಿಸಲಿದ್ದಾರೆ.
ಯಾವೆಲ್ಲ ಸ್ಮಾರಕಗಳ ಜೀರ್ಣೋದ್ಧಾರ?
ಯೋಜನೆಯಡಿ ಹಂಪಿಯ ಹಲವು ಪ್ರಮುಖ ಸ್ಮಾರಕಗಳ ಸಂರಕ್ಷಣೆ ಮತ್ತು ಪುನರ್ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
-
ವಿರೂಪಾಕ್ಷ ದೇವಾಲಯ: ಉತ್ತರ ಬಜಾರ್ ಮತ್ತು ದಕ್ಷಿಣ ಬಜಾರ್ ಭಾಗಗಳ ಸಂಪೂರ್ಣ ಉದ್ದದ ಸಂರಕ್ಷಣೆ.
-
ವಿಜಯ ವಿಠಲ ದೇವಾಲಯ ಸಂಕೀರ್ಣ: ಸಮೀಪದಲ್ಲಿರುವ ಶ್ರೀ ಭಾಷ್ಯಕಾರ ಗುಡಿಯ ಪಶ್ಚಿಮ ಭಾಗದಲ್ಲಿ ಕುಸಿದು ಬಿದ್ದಿರುವ ಮಂಟಪದ ಪುನರ್ನಿರ್ಮಾಣ.
-
ಹೇಮಕೂಟ ಬೆಟ್ಟ: ಬೆಟ್ಟದ ಮೇಲಿರುವ ಜೈನ ದೇವಾಲಯಗಳ ನವೀಕರಣ ಮತ್ತು ಸಂರಕ್ಷಣೆ.
-
ಸಿಂಗನಾಯಕರಹಳ್ಳಿ: ಸರಸ್ವತಿ ದೇವಾಲಯ ಸಂಕೀರ್ಣದ ಜೀರ್ಣೋದ್ಧಾರ.
ಈ ಯೋಜನೆ ಜಾರಿಯಾದರೆ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಮತ್ತಷ್ಟು ಬಲ ಸಿಗಲಿದ್ದು, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸಹಕಾರಿಯಾಗಲಿದೆ.








