ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಇಂದು (ನ.11) ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಿ ಸೀಲ್ ಮಾಡಲಾಗಿದೆ. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.

ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಹಾಗೂ ನೆರೆದಿದ್ದ ಭಕ್ತರಿಗೆ ಅಂತಿಮ ದರ್ಶನದ ಅವಕಾಶ ಕಲ್ಪಿಸಿದ ಬಳಿಕ ಅರ್ಚಕರು ದೇವಿಗೆ ಮಾಡಿದ್ದ ಅಲಂಕಾರವನ್ನು ತೆರವುಗೊಳಿಸಿದರು. ದೇವಿಗೆ ಸಮರ್ಪಿಸಿದ್ದ ಒಡವೆಗಳನ್ನು ತೆಗೆದು ಅಲಂಕಾರ ವಿಸರ್ಜನೆ ಪೂಜೆ ನೆರವೇರಿಸಲಾಯಿತು.
ನಂತರ ದೀಪಕ್ಕೆ ಎಣ್ಣೆ ಹಾಕಿದ ಅರ್ಚಕರ ತಂಡ, ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಶಾಸಕರು, ಸಂಸದರು ಹಾಗೂ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಿ ಸೀಲ್ ಮಾಡಿತು.
30 ಲಕ್ಷಕ್ಕೂ ಅಧಿಕ ಭಕ್ತರಿಂದ ದೇವಿಯ ದರ್ಶನ
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಭಕ್ತರ ಪಾಲಿಗೆ ವಿಶೇಷವಾಗಿದ್ದು, ದಾಖಲೆಯ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
1000 ರೂ. ಹಾಗೂ 300 ರೂ. ವಿಶೇಷ ದರ್ಶನದ ಟಿಕೆಟ್ಗಳ ಮಾರಾಟ ಮತ್ತು ಲಾಡು ಪ್ರಸಾದದ ಮಾರಾಟದಿಂದ ಒಟ್ಟು 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳಿಂದ ಈಡುಗಾಯಿ ಸೇವೆ
ಜಾತ್ರಾ ಮಹೋತ್ಸವ ಯಾವುದೇ ಗೊಂದಲ, ನೂಕುನುಗ್ಗಲು ಇಲ್ಲದೆ ಯಶಸ್ವಿಯಾಗಿ ನಡೆದರೆ ಎಸ್ಪಿ ಶುಭನ್ವಿತಾ ಅವರಿಂದ ಈಡುಗಾಯಿ ಒಡೆಸುವುದಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ದೇವಾಲಯದ ಎದುರು ಎಸ್ಪಿ ಶುಭನ್ವಿತಾ ಅವರೊಂದಿಗೆ ಡಿವೈಎಸ್ಪಿ, ಸಿಪಿಐಗಳು ಹಾಗೂ ಪಿಎಸ್ಐಗಳು ಈಡುಗಾಯಿ ಒಡೆದು ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಶುಭನ್ವಿತಾ, ಹಾಸನಾಂಬೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದರು.
ಮುಂದಿನ ವರ್ಷದ ಜಾತ್ರೆ ಯಾವಾಗ?
ಮುಂದಿನ ವರ್ಷ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 21ರಿಂದ ಅಕ್ಟೋಬರ್ 31ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ.









