ಕಲಬುರಗಿ: ನಗರದ ಸ್ಟೇಷನ್ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ಹೀನಾ ಹಾಗೂ ಯುಎಫ್‌ಡಬ್ಲ್ಯೂಸಿ ಸಿಬ್ಬಂದಿ ಪಿಂಕುಬಾಯಿ ಅವರು ಫಲಾನುಭವಿಗೆ ನೀಡಬೇಕಾದ ಮೂರು ತಿಂಗಳ ಮೊಟ್ಟೆ ಹಣದಲ್ಲಿ ಒಂದು ತಿಂಗಳ ಹಣವನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಮೊತ್ತ 1,200 ರೂ. ಜೊತೆಗೆ ಒಂದು ತಿಂಗಳ ಹಣ 4,830 ರೂ. ಸೇರಿಸಿ ಒಟ್ಟು 6,030 ರೂ. ಲಂಚವಾಗಿ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದೂರುದಾರರಾದ ಸೌಭಾಗ್ಯ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೂರ್ವ ಯೋಜನೆಯಂತೆ ಹಣ ನೀಡುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ತಂಡ ಆರೋಪಿಗಳನ್ನು ಸ್ಥಳದಲ್ಲೇ ಬಲೆಗೆ ಬೀಳಿಸಿದೆ. ಘಟನೆಯ ಬಳಿಕ ಇಬ್ಬರನ್ನೂ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಮುಂದಿನ ವಿಚಾರಣೆಯನ್ನು ಕೈಗೊಂಡಿದ್ದಾರೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



