ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಕಠಿಣ ಸಂದೇಶ ನೀಡಿದೆ. ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವ ನ್ಯಾಯಾಲಯದ ಆದೇಶದಂತೆ, ನಟ ಗುರುವಾರ ಸಂಜೆ ತಿಹಾರ್ ಜೈಲಿನ ಮುಂದೆ ಶರಣಾಗಿದ್ದಾರೆ.
ಜನವರಿ 5ರಂದು ಸಂಜೆ ನಾಲ್ಕು ಗಂಟೆಗೆ ರಾಜ್ಪಾಲ್ ಯಾದವ್ ಜೈಲಿಗೆ ಆಗಮಿಸಿದ್ದು, ನಂತರ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಅವರನ್ನು ಬಂಧನದಲ್ಲಿಟ್ಟಿದ್ದಾರೆ.
ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದಾಖಲಿಸಿದ್ದ ಈ ಪ್ರಕರಣದಲ್ಲಿ, ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿಗಳೆಂದು ಘೋಷಿಸಿತ್ತು. 2019ರಲ್ಲಿ ಸೆಷನ್ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿತ್ತು.
ನಂತರ, ರಾಜ್ಪಾಲ್ ಯಾದವ್ ಈ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ಸೆಟಲ್ ಮಾಡಲು ಯತ್ನಿಸುತ್ತಿದ್ದೇವೆ ಎಂಬ ವಾದದ ಮೇರೆಗೆ 2024ರಲ್ಲಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಹಲವು ಅವಕಾಶಗಳಿದ್ದರೂ ಹಣವನ್ನು ಪಾವತಿಸದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇತ್ತೀಚೆಗೆ ಇನ್ನೂ ಕೆಲವು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಪಾಲ್ ಪರ ವಕೀಲರು ಮನವಿ ಮಾಡಿದ್ದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು. ಬುಧವಾರ ನಾಲ್ಕು ಗಂಟೆಗಳ ಒಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.
ಈ ವೇಳೆ ನ್ಯಾಯಾಲಯ ನೀಡಿದ ಟಿಪ್ಪಣಿ ಗಮನ ಸೆಳೆದಿದೆ. “ಯಾವುದೇ ವ್ಯಕ್ತಿ ನಟನಾಗಿದ್ದಾನೆ, ಪ್ರಸಿದ್ಧನಾಗಿದ್ದಾನೆ ಅಥವಾ ನಿರ್ದಿಷ್ಟ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ವಿಶೇಷ ಸೌಲಭ್ಯ ನೀಡುವುದಿಲ್ಲ. ಒಂದೇ ತಪ್ಪು ಮರುಮರು ನಡೆದರೆ ಅದನ್ನು ಸಹಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಪ್ರಕರಣವು ಸೆಲೆಬ್ರಿಟಿಗಳಿಗೂ ಕಾನೂನು ಒಂದೇ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ನೀಡಿದೆ.



