ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿ ಭದ್ರತಾ ವಲಯವನ್ನು ಸಕ್ರಿಯಗೊಳಿಸಿದೆ. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಭಕ್ತರ ಜೀವ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರವೀಣ್ ಎಂಬ ಭಕ್ತ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆ ಮಾರ್ಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಗೆ ಆದೇಶ ನೀಡಿದೆ.
ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪ್ರತಿ ಕಿಲೋಮೀಟರ್‌ಗೆ ಒಂದೊಂದು ಭದ್ರತಾ ತಂಡವನ್ನು ನಿಯೋಜಿಸಲಾಗಿದ್ದು, ಒಟ್ಟು 8 ತಂಡಗಳು ಹೈಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ತಂಡಗಳಿಗೆ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ನೀಡಲಾಗಿದ್ದು, ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಮತ್ತು ಎಪಿಸಿ ಕ್ಯಾಂಪ್ ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ.
ಭಕ್ತರು ಒಬ್ಬೊಬ್ಬರಾಗಿ ಅಥವಾ ಒಂಟಿಯಾಗಿ ಕಾಡಿನೊಳಗೆ ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪಾದಯಾತ್ರೆ ಗುಂಪು ಗುಂಪಾಗಿ ಮಾತ್ರ ನಡೆಯಬೇಕು. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಡ್ರೋನ್ ಕ್ಯಾಮರಾಗಳ ಮೂಲಕವೂ ನಿರಂತರ ನಿಗಾವಹಿಸಲಾಗುತ್ತಿದೆ.
ಫೆಬ್ರವರಿ 14ರಿಂದ 18ರವರೆಗೆ ನಡೆಯುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.
ಜನವರಿ 21ರಂದು ಮುಂಜಾನೆ ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 150ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ವೇಳೆ ತೆರಳುತ್ತಿದ್ದಾಗ ಚಿರತೆ ಪ್ರವೀಣ್ ಕುಮಾರ್ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.



