ಚಾಮರಾಜನಗರ: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಶಂಕಿತ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಬಳಿಕ ಚಾಮರಾಜನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹನೂರು ತಾಲೂಕಿನ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಶಾಗ್ಯ DRFO ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶಕ್ಕೆ ಮೂವರು ನುಗ್ಗಿ ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು ಎನ್ನಲಾಗಿದೆ. ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಗೆ ಈ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.
ಅರಣ್ಯ ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸೂಚಿಸಿದರೂ, ಮೂವರು ಸಿಬ್ಬಂದಿ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಕೌಂಟರ್ ಫೈರಿಂಗ್‌ನಲ್ಲಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಹನೂರು ತಾಲೂಕಿನ ತೋಮಿಯರ್‌ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಎಂದು ಗುರುತಿಸಲಾಗಿದೆ.
ಎನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಶಾಗ್ಯ DRFO ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಇತ್ತ ಮೃತರ ಕುಟುಂಬಸ್ಥರು ಎನ್‌ಕೌಂಟರ್ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೃತರು ಕೃಷಿಕರಾಗಿದ್ದು, ದನ ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಅವರು ವನ್ಯಜೀವಿಗಳನ್ನು ಬೇಟೆಯಾಡಿದ್ದರು ಎಂಬುದಕ್ಕೆ ಸಾಕ್ಷ್ಯವೇನು ಎಂದು ಪ್ರಶ್ನಿಸಿರುವ ಕುಟುಂಬಸ್ಥರು, ಬೇಟೆಯ ಆರೋಪವಿದ್ದರೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಗುಂಡು ಹಾರಿಸುವ ಅಗತ್ಯವೇನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಬೇತಿಯಲ್ಲಿರುವ ಅರಣ್ಯ ಸಿಬ್ಬಂದಿಯಿಂದ ಈ ಕಾರ್ಯಾಚರಣೆ ನಡೆದಿದೆ ಎಂಬ ಆರೋಪವನ್ನೂ ಮಾಡಿರುವ ಕುಟುಂಬಸ್ಥರು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.



