ಬೆಂಗಳೂರು: ದೇಶಾಭಿಮಾನವನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣದಿಂದ ವಿನಾಯಿತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.
ಧ್ವಜಾರೋಹಣ ಮಾಡುವುದು ಸೌಭಾಗ್ಯ. ಈ ಹಿಂದೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿತ್ತು. ಎರಡು ವರ್ಷ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಜಿಲ್ಲಾ ಉಸ್ತುವಾರಿ ಬೇಡ ಎಂದು ಹೇಳಿದ್ದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಬಗ್ಗೆ ತಿಳಿಸಿದ್ದೆ ಎಂದು ಹೇಳಿದರು.
ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬಸಂತಪ್ಪ ಅವರಿಗೆ ಧ್ವಜಾರೋಹಣದ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಅಷ್ಟೇ ಹೊರತು ಧ್ವಜಾರೋಹಣದಿಂದ ಹಿಂದೆ ಸರಿಯುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಮಂತ್ರಿಯಾದ ಬಳಿಕ ಧ್ವಜಾರೋಹಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ತಾವು 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲೂ ಸಚಿವರಾಗಿದ್ದೆ ಎಂದು ಅವರು ಇದೇ ವೇಳೆ ನೆನಪಿಸಿಕೊಂಡರು.
ದೇಶದ್ರೋಹಿ ಯಾರು ಎಂಬುದು ಜನರಿಗೆ ಗೊತ್ತಿದೆ. ದೇಶಾಭಿಮಾನವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಯಾರಿಂದ ಬಂದಿದೆ ಎಂಬುದು ದೇಶಕ್ಕೆ ಗೊತ್ತಿದೆ. ಅವರಿಂದ ನಾನು ದೇಶಾಭಿಮಾನ ಕಲಿಯುವುದಿಲ್ಲ. ನಾನು ಹಿಂದೂಸ್ತಾನಿ, ನಾನು ಕನ್ನಡಿಗ ಎಂದು ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.



