ಬಳ್ಳಾರಿ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಜೋಳ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ರೂಪನಗುಡಿ ಗ್ರಾಮದಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್‌ಗಳ ಮೇಲೆ ಬಳ್ಳಾರಿ ಸಹಾಯಕ ಆಯುಕ್ತ (ಎಸಿ) ರಾಜೇಶ್ ಹೆಚ್.ಡಿ ನೇತೃತ್ವದಲ್ಲಿ ದಾಳಿ ನಡೆಸಿದರು. ಈ ದಾಳಿಯಲ್ಲಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿತು. ದಾಳಿ ವೇಳೆ ರೈತರಿಂದ ಪಹಣಿ ಪಡೆದಿದ್ದ 2400 ಜೋಳದ ಮೂಟೆಗಳು ಪತ್ತೆಯಾಗಿದ್ದು, ಅಧಿಕಾರಿಗಳಿಂದ ಜಪ್ತಿ ಮಾಡಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಈ ಜಾಲವು ರೈತರಿಂದ ಕಡಿಮೆ ಬೆಲೆಯಲ್ಲಿ ಜೋಳ ಖರೀದಿಸಿ, ನಂತರ ಸೇವಾ ಸಹಕಾರ ಸಂಘದ ಮೂಲಕ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಂತೆ ಕಂಡು ಬಂದಿದೆ. ಈ ಅಕ್ರಮ ಖರೀದಿ–ಮಾರಾಟದಲ್ಲಿ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಕುರಿತು ಸಹ ಅನುಮಾನ ವ್ಯಕ್ತವಾಗಿದೆ.
ಈ ಸಂಬಂಧ ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಧಿಕಾರಿಗಳು ಆರೋಪಿಗಳನ್ನ ಪತ್ತೆಹಚ್ಚಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.



