ಬಳ್ಳಾರಿ:- ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಧಿಕಾರಿಗಳು ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿರುವ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ.
ಸರ್ಕಾರದಿಂದ ಬಂದ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿದ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿರುವ ಶಂಕೆಯಿದೆ. ಖಚಿತ ಮಾಹಿತಿಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಎಡ್ವಿನ್ ಎಂಬ ವ್ಯಕ್ತಿಗೆ ಸೇರಿದ ಗೋಡೌನ್‌ನಲ್ಲಿ ಸುಮಾರು 4,000ಕ್ಕೂ ಹೆಚ್ಚು ಚೀಲ ಗೊಬ್ಬರ ಪತ್ತೆಹಚ್ಚಿದ್ದಾರೆ.
ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಯೂರಿಯಾ ಗೊಬ್ಬರ ಸ್ಟಾಕ್ ಮಾಡುವ ಜಾಲ ಸಕ್ರಿಯವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಪ್ರಸಕ್ತ ಸಂದರ್ಭದಲ್ಲಿ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರ ಬೇಡಿಕೆ ಕಡಿಮೆಯಿದ್ದು, ಜೂನ್ ತಿಂಗಳ ಮುಂಗಾರು ವೇಳೆಗೆ ಮಾತ್ರ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ ಈಗಿನಿಂದಲೇ ಗೊಬ್ಬರ ಸಂಗ್ರಹಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಕಳೆದ ವರ್ಷ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಎದುರಾಗಿ ಸರಬರಾಜು ಕೊರತೆಯಾಗಿದೆ. ಈ ಪ್ರಕರಣ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.



