ಶಿವಮೊಗ್ಗ: ಸರ್ಕಾರಿ ಶಾಲೆಯ ಜಗಲಿಯಲ್ಲೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ನಡೆದಿದೆ.
ಬೈಸೆ ಸರ್ಕಾರಿ ಶಾಲೆಯ ಜಗಲಿಯ ಮೇಲಿನ ಮರದ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ರಾಕೇಶ್ ಜೋಗಿ (28) ಎಂದು ಗುರುತಿಸಲಾಗಿದೆ. ಮೃತ ರಾಕೇಶ್ ಬೈಸೆ ಗ್ರಾಮದ ನಿವಾಸಿಯಾಗಿದ್ದಾರೆ.
ಶನಿವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು, ಶಾಲೆಗೆ ಬಂದ ವಿದ್ಯಾರ್ಥಿನಿಯೊಬ್ಬಳು ಮೃತದೇಹವನ್ನು ಕಂಡು ಕೂಗಿಕೊಂಡು ಓಡಿಹೋಗಿದ್ದಾಳೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮೃತ ರಾಕೇಶ್ ರಾತ್ರಿ ವೇಳೆ ಮನೆಯಿಂದ ಹಗ್ಗ ತೆಗೆದುಕೊಂಡು ಹೊರಟಿದ್ದಾನೆ ಎನ್ನಲಾಗಿದ್ದು, ಬೆಳಿಗ್ಗೆ ವರೆಗೆ ಮನೆಗೆ ಮರಳದ ಕಾರಣ ಪೋಷಕರು ಹುಡುಕಾಟ ಆರಂಭಿಸಿದ್ದರು. ನಂತರ ಶನಿವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



