–ಬಸವರಾಜ ಕರುಗಲ್
ಸುನಿ ಸಿಂಪಲ್ಲಾಗಿರೊ ಸ್ಟೋರಿಯನ್ನ, ಎಕ್ಸ್ಟಾರ್ಡಿನರಿ ಸ್ಟೋರಿ ಮಾಡೋದ್ರಲ್ಲಿ ಎತ್ತಿದ ಕೈ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಸಖತ್‌ನ ಜಾಡು ಅದೇ ಹಾದಿಯಲ್ಲಿದ್ದರೂ ಆರ್ಡಿನರಿಯಾಗಿದೆಯಷ್ಟೇ. ಮಧ್ಯಂತರದಿಂದ ಆರಂಭವಾಗುವ ಸಿನಿಮಾ ವಿರಾಮದ ಬಳಿಕ ಪುಟಿದೇಳುತ್ತದೆ. ಕಚಗುಳಿ ಇಡುತ್ತದೆ. ಭಾವುಕತೆ ಉಕ್ಕಿ ಕಣ್ಣಂಚು ಒದ್ದೆಯಾಗುತ್ತದೆ.
ಸಿನಿಮಾದ ಕಥೆ ಗಣೇಶ್‌ಗೆ ಹೊಂದಿಕೆಯಾಗಿದ್ದಂತು ಸತ್ಯ, ಆದರೆ ಸಖತ್ ಆಗಿರಬೇಕಿದ್ದ ಮರ್ಡರ್ ಸಸ್ಪೆನ್ಸ್ ಅನಗತ್ಯ ದೃಶ್ಯಗಳಿಂದಾಗಿ ಸಪ್ಪೆ ಎನಿಸುತ್ತಲೇ ಇರುವಾಗ ಕ್ಲೈಮ್ಯಾಕ್ಸ್‌ನಲ್ಲಿ ಬರುವ ತಿರುವು ವಾಹ್!, ಓಹೋ! ಎನಿಸುತ್ತದೆ.
ಟೈಟಲ್ ಕಾರ್ಡ್ ತೋರಿಸುವಾಗ ಇರುವ ಹೊಸತನದ ಹುಮ್ಮಸ್ಸು ಚಿತ್ರದ ಕೊನೇತನಕ ಇದ್ದಿದ್ದರೆ ಸಖತ್ ಸೂಪರ್ ಎನಿಸುತ್ತಿತ್ತು. ರಿಯಾಲಿಟಿ ಶೋವೊಂದನ್ನು ಅಣುಕಿಸುವ ಭರದಲ್ಲಿ ಮರ್ಡರ್ ಮಿಸ್ಟ್ರಿ ಸ್ಟೋರಿ ತಾಳ ತಪ್ಪಿದ ರಾಗದಂತೆ ಭಾಸವಾಗುತ್ತದೆ.
ಸಾಂದರ್ಭಿಕ ಅಂಧತ್ವ ಎನ್ನುವುದು ಇಡೀ ಸಿನಿಮಾದ ಹೈಲೈಟ್. ಅದು ಹೇಗೆ ಅನ್ನೋದನ್ನ ಸಿನಿಮಾ ನೋಡಿ ತಿಳ್ಕೋಬೇಕು. ಕೋರ್ಟ್ ಡ್ರಾಮಾದ ಒಂದು ಸನ್ನಿವೇಶದಲ್ಲಿ ಸುನಿ ಡಿಫರೆಂಟ್ ಆಗಿ ಥಿಂಕ್ ಮಾಡಿದ್ದಾರೆ. ಅದೇನೆಂದರೆ ಅಪಘಾತವೆಂದು ದಾಖಲಾದ ಕೊಲೆಯ ಘಟನೆಯನ್ನು ಪಾತ್ರದಾರಿಗಳಲ್ಲದೇ ಪ್ರೇಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇಮ್ಯಾಜಿನ್ ಮಾಡಿಕೊಳ್ಳುವ ಪ್ರಸಂಗ. ಇದು ನೋಡುಗರಿಗೂ ಹೊಸ ಅನುಭವ ನೀಡುತ್ತಾ ಚಮಕ್ ಮಾಡುತ್ತೆ.
ಕಥೆಯ ಎಳೆ ತೀರಾ ಸಿಂಪಲ್. ಕಣ್ಣಿಲ್ಲದವರ ಶಾಲೆಯ ಜಾಗದ ಮೇಲೆ ಖಳರ ಕಣ್ಣು. ಅದಕ್ಕಾಗಿ ಜಾಗದ ಮಾಲಕನ ಕೊಲೆ ಸಾಂದರ್ಭಿಕ ಸಾಕ್ಷಿಯಾಗಿ ಕೋರ್ಟ್ ಕಟಕಟೆಗೆ ಬರುವ ನಾಯಕ ವಕೀಲರಿಗೆ ಚಮಕ್ ಕೊಡುತ್ತಾ, ಅಂಧರ ಶಾಲೆ ರಕ್ಷಿಸಿಕೊಳ್ಳುವ ತೀರ್ಪು ಬರುವಂತೆ ಪ್ಲ್ಯಾನ್… ಇದಿಷ್ಟು ಸಖತ್‌ನ ತಿರುಳು.
ಸಸ್ಪೆನ್ಸ್ ಸ್ಕ್ರಿಪ್ಟ್‌ಗೆ ಕಾಮಿಡಿ ಲೇಪ ಹಾಕಲು ಹೊರಟ ಸುನಿ ಆರಂಭದಲ್ಲಿ ಪ್ರೀತಿಯ ಹಿಂದೆ ಬಿದ್ದು ಕಥೆ ಎಳೆದಿದ್ದಾರೆ. ಇಲ್ಲಿ ಹೇಳಿಕೊಳ್ಳುವ ಹಾಸ್ಯವೂ ಇಲ್ಲ, ಚಿತ್ರಕ್ಕೆ ವೇಗವೂ ದಕ್ಕುವುದಿಲ್ಲ. ಸಖತ್ ಸಿನಿಮಾ ಸಖತ್ ಎನಿಸೋದೇ ದ್ವಿತೀಯಾರ್ಧದಲ್ಲಿ. ಒಟ್ಟಾರೆ ಫ್ಯಾಮಿಲಿ ಸಮೇತ ಮುಜುಗರ ಇಲ್ಲದೇ ಸಿನಿಮಾ ನೋಡಲಡ್ಡಿಯಿಲ್ಲ.
ಶಾಲಾ ಜಾಗದ ಮಾಲಕನನ್ನು ಕೊಂದವರು ಯಾರು? ಸಾಂದರ್ಭಿಕ ಅಂಧನ ಪ್ರೀತಿ ಏನಾಯ್ತು? ಗಣೇಶ್‌ಗೆ ದೃಷ್ಟಿ ಇತ್ತಾ? ಇಲ್ವಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಒಂದು ಸಾರಿ ಸಖತ್ ನೋಡಿ..
ಗಣೇಶ್ ಅಭಿನಯ ಲೀಲಾಜಾಲ. ಜಡ್ಜ್ ಆಗಿರೊ ಮಾಳವಿಕಾ ಸಿರಿಯಸ್ಸಾಗಿದ್ದು ಕೆಲ ಡೈಲಾಗ್‌ಗಳ ಮೂಲಕ ಕಿರುನಗೆ ಬೀರುವಂತೆ ಮಾಡುತ್ತಾರೆ. ಮಾಸ್ಟರ್ ಗಣೇಶ್ ಇನ್ನಷ್ಟು ಪಳಗಿದರೆ ಥೇಟ್ ಅಪ್ಪನ ಪಡಿಯಚ್ಚು. ನಾಯಕಿರಾದ ಸುರಭಿ, ನಿಶ್ಚಿಕಾ ಪರವಾಗಿಲ್ಲ. ರಂಗಾಯಣ ರಘು, ಶೋಭರಾಜ್, ಧರ್ಮಣ್ಣ, ಸಾಧು ಕೋಕಿಲ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಇಡೀ ಸಿನಿಮಾದ ಹೈಲೈಟ್ ರಾಮಕೃಷ್ಣ ಅವರ ಪಾತ್ರ. ಪಾತ್ರ ಚಿಕ್ಕದಾದರೂ, ಸಿನಿಮಾದ ಕೊನೆಯವರೆಗೂ ಕಾಡುತ್ತದೆ. ಜ್ಯೂಡಾ ಸ್ಯಾಂಡಿ ಸಂಗೀತದಲ್ಲಿ ಕಾಲು ಕಂಪಿಸುವ ಹಾಡುಗಳಿವೆಯೇ ಹೊರತು ಇಂಪಿಲ್ಲ, ಸಂತೋಷ್ ಪಾತಾಜೆ ಕ್ಯಾಮೆರಾ ವರ್ಕ್ ಬಗ್ಗೆ ನೋ ನೆಗೆಟಿವ್ ಕಾಮೆಂಟ್ಸ್. ವೃತ್ತಿನೈಪುಣ್ಯತೆ ಎದ್ದು ಕಾಣುತ್ತದೆ. ಪ್ರೊಡ್ಯೂಸರ್ ನಿಶಾ ವೆಂಕಟ್ ಕೋಣಂಕಿ ಬಂಡವಾಳವನ್ನು ಮಾತ್ರ ಈ ಚಿತ್ರದಿಂದ ನಿರೀಕ್ಷಿಸಬಹುದು.
ಕುರುಡುತನದ ಹಿನ್ನೆಲೆಯಲ್ಲಿ ಸಾಗಿ ಬಂದ ನನ್ನ ಪ್ರೀತಿಯ ರಾಮು, ಕವಚ ಸಿನಿಮಾಗಳಿಗೆ ಹೋಲಿಸಿದರೆ ಸಖತ್ ಸಿನಿಮಾ ಸುಮಾರಾಗಿದೆ ಎನ್ನಬಹುದು.
ವೀಕ್ಷಣಾ ಸಹಕಾರ: ಶಾರದಾ ಚಿತ್ರಮಂದಿರ, ಕೊಪ್ಪಳ.
ರೇಟಿಂಗ್: ***
———————
ರೇಟಿಂಗ್ ಡಿಟೇಲ್ಸ್:
* – ಚನ್ನಾಗಿಲ್ಲ
** – ಸುಮಾರಾಗಿದೆ
*** – ನೋಡಬಹುದು
**** – ನೋಡಬೇಕು
***** – ನೋಡಲೇಬೇಕು