ಆನೇಕಲ್:- ತಮಿಳುನಾಡು – ಕರ್ನಾಟಕ ಗಡಿ ಭಾಗದ ಬ್ಯಾಲದ ಕೆರೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ಮೃತ ರೈತನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಬೈಕ್‌ನಲ್ಲಿ ಮಗನೊಂದಿಗೆ ತೆರಳುತ್ತಿದ್ದ ವೆಂಕಟೇಶ್ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅವರ ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೆಯನ್ನು ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಗಂಗನಹಳ್ಳಿ ಬಳಿ ರೈತನ ಮೃತದೇಹವನ್ನು ಮುಖ್ಯರಸ್ತೆಯಲ್ಲಿ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ಜರುಗಿದೆ.



