ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಯ ಪ್ರಮುಖ ಭಾಗವಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣಪತ್ರ ಬ್ಯಾಂಕ್ಗೆ ಸಲ್ಲಿಸುವುದು ಕಡ್ಡಾಯವಾಗಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ , ಮರಣ ಹೊಂದಿರುವ ಫಲಾನುಭವಿಗಳಗೆ ಧನಸಹಾಯ ಪಾವತಿಯಾಗುವುದನ್ನು ತಪ್ಪಿಸಬೇಕು. ಕುಟುಂಬದ ಜೀವನ ನಿರ್ವಹಣೆಗೆ ಹೆಚ್ಚು ಉಪಯೋಗವಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಪಾವತಿಯಾಗುವ ಮೊತ್ತವು ಮರಣ ಹೊಂದಿರುವ ಫಲಾನುಭವಿಗಳಿಗೆ ಕೆಲವು ಕಡೆ ಪಾವತಿಯಾಗುವುದನ್ನು ತಡೆಗಟ್ಟುವುದು ಅವಶ್ಯವಾಗಿರುತ್ತದೆ. ಇದರಿಂದ ಸರ್ಕಾರವು ಪಾವತಿಸುವ ಮೊತ್ತವು ಸದ್ವಿನಿಯೋಗವಾಗಲು ಹಾಗೂ ಸರ್ಕಾರದ ಹಣ ಇತರೆ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗವ ನಿಟ್ಟಿನಲ್ಲಿ ಸರ್ಕಾರವು ಕ್ರಮ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.



