ಬೆಂಗಳೂರು: ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾಂತ್ರಿಕವಾಗಿ ಎಫ್ಐಆರ್ ದಾಖಲಿಸುವುದು ಹಾಗೂ ಬಂಧನ ನಡೆಸುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಎಂಎ ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಹೆಚ್ಚುತ್ತಿರುವ ಆರೋಪಗಳ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ತೀರ್ಪುಗಳ ಆಧಾರದಲ್ಲಿ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೇ ನೇರವಾಗಿ ಪ್ರಕರಣ ದಾಖಲಿಸುವ ಪ್ರವೃತ್ತಿ ಕಂಡುಬಂದಿದ್ದರಿಂದ, ಅದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಡಿಜಿ–ಐಜಿಪಿ ಮಾರ್ಗಸೂಚಿಯ 8 ಪ್ರಮುಖ ಅಂಶಗಳು:
-
ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಪ್ರಕರಣಗಳಲ್ಲಿ ದೂರುದಾರರು ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳ ದೂರುಗಳನ್ನು (ಗಂಭೀರ ಅಪರಾಧ ಹೊರತುಪಡಿಸಿ) ಸ್ವೀಕರಿಸಬಾರದು.
-
ಪ್ರಾಥಮಿಕ ವಿಚಾರಣೆ ಕಡ್ಡಾಯ: ಎಫ್ಐಆರ್ ಮೊದಲು ಆರೋಪ ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಪರಿಶೀಲಿಸಬೇಕು.
-
ಹಿಂಸೆಗೆ ಪ್ರಚೋದನೆ ಇದ್ದರೆ ಮಾತ್ರ ಕೇಸ್: ದ್ವೇಷ, ದೇಶದ್ರೋಹ ಅಥವಾ ಸಾರ್ವಜನಿಕ ಅಶಾಂತಿ ಪ್ರಕರಣಗಳಲ್ಲಿ ಹಿಂಸೆಗೆ ಸ್ಪಷ್ಟ ಪ್ರಚೋದನೆ ಇದ್ದಾಗ ಮಾತ್ರ ಪ್ರಕರಣ ದಾಖಲಿಸಬೇಕು.
-
ರಾಜಕೀಯ ಟೀಕೆಗಳಿಗೆ ರಕ್ಷಣೆ: ಕಟುವಾದ ರಾಜಕೀಯ ಟೀಕೆಗಳಿಗೆ ಯಾಂತ್ರಿಕವಾಗಿ ಕೇಸ್ ಹಾಕಬಾರದು. ಸಂವಿಧಾನದ 19(1)(ಎ) ಅಡಿ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು.
-
ಮಾನಹಾನಿ ಅಸಂಜ್ಞೇಯ ಅಪರಾಧ: ಮಾನಹಾನಿಗೆ ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸಬಾರದು. ದೂರುದಾರರನ್ನು ಮ್ಯಾಜಿಸ್ಟ್ರೇಟ್ ಬಳಿ ಹೋಗುವಂತೆ ಸೂಚಿಸಬೇಕು.
-
ಬಂಧನಕ್ಕೆ ನಿಯಂತ್ರಣ: ಅರ್ನೇಶ್ ಕುಮಾರ್ ತೀರ್ಪಿನಂತೆ ಅನಗತ್ಯ ಬಂಧನಕ್ಕೆ ಅವಕಾಶವಿಲ್ಲ.
-
ಕಾನೂನು ಸಲಹೆ ಕಡ್ಡಾಯ: ಸೂಕ್ಷ್ಮ ಮತ್ತು ರಾಜಕೀಯ ವಿಚಾರಗಳಲ್ಲಿ ಎಫ್ಐಆರ್ ಮೊದಲು ಸರ್ಕಾರಿ ಅಭಿಯೋಜಕರ ಸಲಹೆ ಪಡೆಯಬೇಕು.
-
ಸುಳ್ಳು/ರಾಜಕೀಯ ಪ್ರೇರಿತ ದೂರುಗಳ ಮುಕ್ತಾಯ: ದೂರು ದುರುದ್ದೇಶಪೂರಿತವೆಂದು ಕಂಡುಬಂದರೆ BNSS ಸೆಕ್ಷನ್ 176(1) ಅಡಿ ಪ್ರಕರಣ ಮುಕ್ತಾಯಗೊಳಿಸಬೇಕು.
ಈ ಮೂಲಕ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪೋಸ್ಟ್ಗೂ ಎಫ್ಐಆರ್ ದಾಖಲಿಸುವ ಪ್ರವೃತ್ತಿಗೆ ಡಿಜಿ–ಐಜಿಪಿ ಬ್ರೇಕ್ ಹಾಕಿದಂತಾಗಿದೆ.



