ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸದಾ ಬಿಗಿ ಪೊಲೀಸ್ ಬಂದೋಬಸ್ತ್ ಇರುವ ವಿಧಾನಸೌಧದಲ್ಲೇ, ಪ್ರಭಾವಿ ಸಚಿವರೊಬ್ಬರ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು ಹಾಗೂ ನೂರಾರು ಗ್ರಾಂ ಚಿನ್ನಾಭರಣ ಕಳ್ಳರ ಪಾಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ವಿಧಾನಸೌಧದ ಕಚೇರಿಯಲ್ಲಿ ಈ ಕಳ್ಳತನ ನಡೆದಿದ್ದು, ಸಚಿವರನ್ನು ಭೇಟಿ ಮಾಡಲು ಬಂದಿದ್ದ ನವೀನ್ ಎಂಬುವರು ತಮ್ಮ ಬ್ಯಾಗ್ ಅನ್ನು ಕಚೇರಿಯಲ್ಲೇ ಮರೆತು ಹೋಗಿದ್ದರು. ಆ ಬ್ಯಾಗ್‌ನಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂಪಾಯಿ ನಗದು ಇತ್ತು ಎನ್ನಲಾಗಿದೆ.
ಮಾರನೇ ದಿನ ಬ್ಯಾಗ್ ನಾಪತ್ತೆಯಾಗಿರುವುದನ್ನು ಗಮನಿಸಿದ ನವೀನ್, ತಕ್ಷಣವೇ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಡಿಪಿಎಆರ್ ವಿಭಾಗದ ಡಿ–ಗ್ರೂಪ್ ನೌಕರನೊಬ್ಬ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.



