ಬೆಂಗಳೂರು: ನಡುರಸ್ತೆಯಲ್ಲೇ ಏಕಾಏಕಿ ಆರ್ಎಂಯು ಬಾಕ್ಸ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬಾಗಲೂರು ಕ್ರಾಸ್ ಬಳಿ ನಡೆದಿದೆ.
ಅಮೆಜಾನ್ ಕಚೇರಿ ಗೇಟ್ ನಂಬರ್ 3ರ ಸಮೀಪ ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರಿಗೆ ಸ್ಫೋಟದ ಪರಿಣಾಮ ಗಾಯಗಳಾಗಿವೆ.
ಸ್ಫೋಟದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಓರ್ವನಿಗೆ ಗಂಭೀರ ಗಾಯವಾಗಿದ್ದರೆ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಕೆಲವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಮಾಹಿತಿ ತಿಳಿದು ಯಲಹಂಕ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಫೋಟಕ್ಕೆ ಇಲಿ ಕಾರಣ?
ಆರ್ಎಂಯು ಬಾಕ್ಸ್ ಒಳಗೆ ಇಲಿ ಸೇರಿಕೊಂಡಿದ್ದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಫೋಟವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಸ್ಫೋಟಗೊಂಡ ಬಾಕ್ಸ್ನಲ್ಲಿ ಇಲಿ ಸುಟ್ಟುಹೋಗಿರುವುದು ಪತ್ತೆಯಾಗಿದೆ.
ವಿದ್ಯುತ್ ಪೂರೈಕೆಯಲ್ಲಿ ಆರ್ಎಂಯು ಪಾತ್ರ:
ಮೇನ್ ಕೇಬಲ್ನಿಂದ ವಿದ್ಯುತ್ ಆರ್ಎಂಯು ಬಾಕ್ಸ್ಗೆ ಬರುತ್ತದೆ. ಅಲ್ಲಿಂದ ಚಿಕ್ಕ ಕೇಬಲ್ಗಳ ಮೂಲಕ ವಿವಿಧ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಇದೇ ವ್ಯವಸ್ಥೆಯಲ್ಲಿದ್ದ ಬಾಕ್ಸ್ ಸ್ಫೋಟಗೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.



