ಪುಣೆ: ಎನ್‌ಸಿಪಿಯ ಹಿರಿಯ ನಾಯಕಿ ಸುನೇತ್ರಾ ಪವಾರ್ ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವಾಲಯಕ್ಕೆ ಆಗಮಿಸಿ ಅವರು ತಮ್ಮ ಕರ್ತವ್ಯಗಳನ್ನು ಆರಂಭಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿರುವುದರಿಂದ ಸುನೇತ್ರಾ ಪವಾರ್ ಅವರ ಅಧಿಕಾರ ಸ್ವೀಕಾರ ಮಹಾರಾಷ್ಟ್ರ ರಾಜಕೀಯದಲ್ಲಿ ಐತಿಹಾಸಿಕ ಕ್ಷಣವಾಗಿದೆ.
ಸುನೇತ್ರಾ ಪವಾರ್ ಅವರ ಪತಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಹಠಾತ್ ನಿಧನದ ಬಳಿಕ, ಈ ಮಹತ್ವದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸುವ ಮೊದಲು ಅವರು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ದಾದರ್‌ನ ಚೈತ್ಯಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಿದರು.
ಅನಂತರ ಸುನೇತ್ರಾ ಪವಾರ್ ತಮ್ಮ ಹಿರಿಯ ಪುತ್ರ ಪಾರ್ಥ್ ಪವಾರ್ ಹಾಗೂ ಎನ್‌ಸಿಪಿಯ ಹಿರಿಯ ನಾಯಕರೊಂದಿಗೆ ಸಚಿವಾಲಯಕ್ಕೆ ತೆರಳಿ ಅಧಿಕಾರ ಸ್ವೀಕರಿಸಿದರು. ಅವರಿಗೆ ಈ ಹಿಂದೆ ಅಜಿತ್ ಪವಾರ್ ವಹಿಸಿಕೊಂಡಿದ್ದ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಜನವರಿ 31ರಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ್ದರು.



