ಮಂಗಳೂರು: ರಾಜ್ಯದಲ್ಲಿ ಮತ್ತೆ ಗಮನ ಸೆಳೆದಿರುವ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮೂವರು ವಿಧಿವಿಜ್ಞಾನ ಪ್ರಯೋಗಾಲಯದ (FSL) ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ರಚಿಸಿದೆ. ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಈ ತಂಡವನ್ನು ರಚಿಸಲಾಗಿದೆ.
ಬೆಂಗಳೂರು, ಹಾವೇರಿ ಮತ್ತು ಬೆಳಗಾವಿ ಜಿಲ್ಲಾ ವಿಧಿವಿಜ್ಞಾನ ಪ್ರಯೋಗಾಲಯಗಳ ತಲಾ ಒಬ್ಬ ವೈದ್ಯರು ಮೆಡಿಕಲ್ ಬೋರ್ಡ್ನಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಇದ್ದಾರೆ. ಸುಪ್ರೀಂಕೋರ್ಟ್ ಮೆಡಿಕಲ್ ಬೋರ್ಡ್ ರಚಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಎಸ್ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ತಂಡವನ್ನು ರಚಿಸಿದ್ದಾರೆ.
ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮರುಸೃಷ್ಟಿ
ಇತ್ತೀಚೆಗೆ ಎಸ್ಐಟಿ ಅಧಿಕಾರಿಗಳು ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಮಣ್ಣಸಂಕದ ಕಾಡಿಗೆ ಭೇಟಿ ನೀಡಿದ್ದರು. ಸುಮಾರು 14 ವರ್ಷಗಳ ಹಿಂದಿನ ಪ್ರಕರಣದ ತನಿಖೆಯ ಭಾಗವಾಗಿ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಘಟನೆಯ ಮರುಸೃಷ್ಟಿ ನಡೆಸಲಾಗಿತ್ತು.
ಎಸ್ಐಟಿ ತನಿಖಾಧಿಕಾರಿಯ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ತನಿಖಾ ತಂಡದ ಜೊತೆಗೆ ಎಫ್ಎಸ್ಎಲ್ ಸಿಬ್ಬಂದಿಯೂ ಭಾಗವಹಿಸಿದ್ದರು. ಈ ವೇಳೆ ಸೌಜನ್ಯ ಅವರ ಕುಟುಂಬಸ್ಥರು ಮೃತದೇಹ ಪತ್ತೆಯಾಗಿದ್ದ ನಿಖರ ಸ್ಥಳವನ್ನು ಅಧಿಕಾರಿಗಳಿಗೆ ತೋರಿಸಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಮೆಡಿಕಲ್ ಬೋರ್ಡ್ ರಚನೆ ಹಾಗೂ ಘಟನಾ ಸ್ಥಳದ ಮರುಸೃಷ್ಟಿ ನಡೆಸಿರುವುದು ಮಹತ್ವ ಪಡೆದಿದೆ.








