ಚಾಮರಾಜನಗರ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಪಾದಯಾತ್ರೆಯ ವೇಳೆ ಚಿರತೆ ದಾಳಿ ನಡೆದಿದ್ದು, 8 ವರ್ಷದ ಬಾಲಕ ಗಾಯಗೊಂಡಿರುವ ಘಟನೆ ಭಕ್ತಾದಿಗಳಲ್ಲಿ ಭಯ ಹುಟ್ಟಿಸಿದೆ.
ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್ ಎಂಬ ಬಾಲಕ, ಪೊನ್ನಾಚಿ ಕ್ರಾಸ್‌ನಿಂದ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಗೆ ಒಳಗಾಗಿದ್ದಾನೆ. ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ತೆರಳುತ್ತಿರುವ ಹಿನ್ನೆಲೆ ಈ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ.
ಅರಣ್ಯ ಮಾರ್ಗದಲ್ಲಿ ಸಾಗುತ್ತಿದ್ದ ಪಾದಯಾತ್ರಿಕರ ಗುಂಪಿನ ನಡುವೆ ಚಿರತೆ ಕಾಣಿಸಿಕೊಂಡಿದ್ದು, ಬಾಲಕನ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಭಕ್ತಾದಿಗಳ ಚೀರಾಟಕ್ಕೆ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಾದಯಾತ್ರಿಕರು ಒಂದು ದೊಡ್ಡ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಪ್ರಕಟಿಸಿದ್ದು, ಭಕ್ತಾದಿಗಳು ಅರಣ್ಯ ಮಾರ್ಗದ ಮೂಲಕ ಪಾದಯಾತ್ರೆ ನಡೆಸದೇ ಮುಖ್ಯ ರಸ್ತೆಯ ಮೂಲಕ ಸಾಗಬೇಕು ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.



