ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಮದುವೆಯ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನಿಗೆ ಸಾಥ್ ನೀಡಿದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಯಲ್ಲಿ ಬಹಿರಂಗವಾದಂತೆ, ಸುಶಾಂತ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಸಂಪರ್ಕಿಸಿ, ನಂಬಿಕೆ ಗಳಿಸಿ ಮದುವೆಯ ಮಾತುಕತೆ ಆರಂಭಿಸುತ್ತಿದ್ದ. ಬಳಿಕ ಹಂತ ಹಂತವಾಗಿ ಹಣ ಪಡೆದು ನಾಪತ್ತೆಯಾಗುತ್ತಿದ್ದ. ಈ ವಂಚನೆಗೆ ಭಾಸ್ಕರ್ ‘ಮಾವ’ ಪಾತ್ರದಲ್ಲಿ ಭಾಗವಹಿಸಿ ಸಂತ್ರಸ್ತೆಯ ಕುಟುಂಬದವರಲ್ಲಿ ವಿಶ್ವಾಸ ಮೂಡಿಸುತ್ತಿದ್ದ. ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿ ನಾಟಕವಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಬ್ಬರ ಜೊತೆ ಮದುವೆ, 9 ಜನರಿಗೆ ಮೋಸ
ಆರೋಪಿಯು ಒಟ್ಟು 9 ಯುವತಿಯರನ್ನು ವಂಚಿಸಿರುವುದು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಯುವತಿಯರೊಂದಿಗೆ ಮದುವೆಯಾಗಿ ನಂತರ ಕೈಕೊಟ್ಟಿದ್ದಾನೆ. ಮುಂಬೈನಲ್ಲಿ ಮದುವೆಯಾಗಿದ್ದ ಯುವತಿಯಿಂದ ಸುಮಾರು ₹6.6 ಲಕ್ಷ ಪಡೆದು ಪರಾರಿಯಾಗಿದ್ದ. ಉಡುಪಿ ಭಾಗದ ಇಬ್ಬರು ಯುವತಿಯರಿಗೆ ಮದುವೆಯಾಗುವುದಾಗಿ ಹೇಳಿ ಹಣ ಪಡೆದಿದ್ದಾನೆ. ಬೆಂಗಳೂರಿನ ಇಬ್ಬರು, ಕಾರ್ಕಳದ ಒಬ್ಬರು ಹಾಗೂ ಮಂಗಳೂರಿನ ಮತ್ತೊಬ್ಬ ಯುವತಿಯೂ ಇದೇ ಮೋಸದ ಬಲಿಯಾಗಿದ್ದಾರೆ.
ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬಳು ದೂರು ನೀಡಿದ್ದಳು. ದೂರು ಆಧಾರಿಸಿ ಪೊಲೀಸರು ಆರೋಪಿ ಹಿನ್ನಲೆ ಕೆದಕಿದಾಗ ವಂಚನೆಗಳ ಸರಣಿ ಬಯಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆನ್‌ಲೈನ್ ಮ್ಯಾಟ್ರಿಮೋನಿ ಸೇವೆ ಬಳಸುವವರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.



