ಮಂಗಳೂರು: ಸಮಾಜ ಸೇವೆಯ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ‘ಹೀರೋ’ ಎಂಬ ಇಮೇಜ್ ಕಟ್ಟಿಕೊಂಡಿದ್ದ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ (Jaleel Baba) ವಿರುದ್ಧ ಭಾರೀ ಡ್ರಗ್ಸ್ ಜಾಲದ ಆರೋಪ ಕೇಳಿಬಂದಿದೆ. ₹5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಆರೋಪಿ ಆಂಬುಲೆನ್ಸ್ ಸಮೇತ ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಳ್ತಂಗಡಿ ಭಾಗದಲ್ಲಿ ಆಂಬುಲೆನ್ಸ್ ಸೇವೆಯ ಮೂಲಕ ಸಮಾಜ ಸೇವಕನಂತೆ ಗುರುತಿಸಿಕೊಂಡಿದ್ದ ಜಲೀಲ್ ಬಾಬಾ, ಅದೇ ಆಂಬುಲೆನ್ಸ್ನ್ನು ಮಾದಕ ವಸ್ತು ಸಾಗಾಣಿಕೆಗೆ ಬಳಸುತ್ತಿದ್ದ ಎನ್ನುವ ಗಂಭೀರ ಆರೋಪ ತನಿಖೆಯಲ್ಲಿ ಹೊರಬಿದ್ದಿದೆ.
ಇತ್ತೀಚೆಗೆ ಮಂಗಳೂರು ಪೊಲೀಸರು ಬಾಗಲಕೋಟೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ₹5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಈ ಡ್ರಗ್ಸ್ ಜಾಲದಲ್ಲಿ ಜಲೀಲ್ ಬಾಬಾ ಹೆಸರು ಬಹಿರಂಗವಾಗಿದೆ.
ಪ್ರಕರಣದಲ್ಲಿ ಮೂವರು ಬಂಧನವಾಗುತ್ತಿದ್ದಂತೆಯೇ ಜಲೀಲ್ ಬಾಬಾ ಆಂಬುಲೆನ್ಸ್ ಸಮೇತ ನಾಪತ್ತೆಯಾಗಿದ್ದು, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಆತನ ಸುಳಿವು ಪತ್ತೆಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ಸಿಸಿಬಿ ಪೊಲೀಸರು ಜಲೀಲ್ ಬಾಬಾ ಪತ್ತೆಗೆ ಬಲೆ ಬೀಸಿದ್ದು, ಡ್ರಗ್ಸ್ ಜಾಲದ ಸಂಪರ್ಕಗಳ ಬಗ್ಗೆಯೂ ತೀವ್ರ ತನಿಖೆ ಮುಂದುವರಿಸಿದ್ದಾರೆ.



