ಮಂಗಳೂರು: ನಂತೂರು ಪದವು ಬಳಿಯ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಆವರಣದಲ್ಲಿರುವ ಪುರಾತನ ಸಂಪಿಗೆ ಮರ ತೆರವು ವಿಚಾರ ಇದೀಗ ದೈವದ ಎಚ್ಚರಿಕೆಯಿಂದ ಚರ್ಚೆಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ಸರ್ಕಲ್ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ NHAI, ರಸ್ತೆ ಡಿವೈಡರ್‌ನಲ್ಲಿರುವ ಮರವನ್ನು ತೆರವುಗೊಳಿಸುವಂತೆ ಸೂಚಿಸಿದ್ದು, ಇದಕ್ಕೆ ರಾಹುಗುಳಿಗ ದೈವ ವಿರೋಧ ವ್ಯಕ್ತಪಡಿಸಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಂತೂರು ಸರ್ಕಲ್‌ನ ಸಾರಿಗೆ ದಟ್ಟಣೆ ನಿಯಂತ್ರಿಸಲು NHAI ಅಂಡರ್‌ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಯೋಜನೆಗೆ ಸಂಬಂಧಿಸಿದಂತೆ ರಸ್ತೆ ಡಿವೈಡರ್‌ನಲ್ಲಿರುವ ಸಂಪಿಗೆ ಮರ ತೆರವು ಅಗತ್ಯವಿದೆ ಎಂದು ಅಧಿಕಾರಿಗಳು ದೈವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದರು.
ಇತ್ತೀಚೆಗೆ ನಡೆದ ನೇಮೋತ್ಸವದ ಸಂದರ್ಭದಲ್ಲಿ ಆಡಳಿತ ಮಂಡಳಿ ಈ ವಿಚಾರವನ್ನು ರಾಹುಗುಳಿಗ ದೈವದ ಮುಂದಿಟ್ಟಿತ್ತು. ಮರ ತೆರವು ವಿಷಯ ತಿಳಿದ ಬಳಿಕ ದೈವ ಉಗ್ರ ಸ್ವರೂಪ ತಾಳಿ, “ಇದು ನನ್ನ ಮರ, ನನ್ನ ದೃಷ್ಟಿ ಅದರ ಮೇಲಿದೆ. ಅದನ್ನು ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ. ಅಲ್ಲದೆ, ದೈವ ನೇರವಾಗಿ ಸಂಪಿಗೆ ಮರವನ್ನು ಹತ್ತಿ ಆದೇಶ ನೀಡಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪುರಾತನ ಸಂಪಿಗೆ ಮರವು ದೈವಸ್ಥಾನಕ್ಕೆ ಸೇರಿದದ್ದಾಗಿದ್ದು, ಹಿಂದಿನ ದಿನಗಳಲ್ಲಿ ಮರದ ಕಟ್ಟೆಯಲ್ಲೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು. ಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇತ್ತು. ಹಿಂದೆಯೂ ರಸ್ತೆ ಅಗಲೀಕರಣದ ವೇಳೆ ಮರವನ್ನು ಉಳಿಸಿಕೊಂಡೇ ರಸ್ತೆ ನಿರ್ಮಿಸಲಾಗಿತ್ತು.
ಆದರೆ ಬಳಿಕ ಈ ಪ್ರದೇಶದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಮರದಲ್ಲಿದ್ದ ರಾಹುಗುಳಿಗ ದೈವಕ್ಕೆ ದೈವಸ್ಥಾನದ ಆವರಣದಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಿ ಪೂಜೆ ಸಲ್ಲಿಸಲಾಗಿತ್ತು. ಅದರ ಬಳಿಕ ಅಪಘಾತಗಳು ನಿಂತುಹೋದವು ಎಂಬುದು ಆಡಳಿತ ಮಂಡಳಿಯ ಹೇಳಿಕೆ.
ಈ ಹಿಂದೆ ಸ್ಥಳೀಯ ಕಾರ್ಪೊರೇಟರ್‌ವೊಬ್ಬರು ಮರ ತೆರವುಗೊಳಿಸಲು ಬಂದಾಗ ಬೃಹತ್ ನಾಗರಹಾವು ಕಾಣಿಸಿಕೊಂಡು ಅವರು ಹಿಂದೆ ಸರಿದಿದ್ದರು ಎನ್ನಲಾಗಿದೆ. ಇದೀಗ NHAI ಮತ್ತೆ ಮರ ತೆರವಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಮರ ತೆರವು ಮಾಡದಂತೆ ಸೂಕ್ತ ಮನವರಿಕೆ ಮಾಡಿಕೊಡಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.



