ಬೆಂಗಳೂರು: ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ಸುದೀರ್ಘ ದಾಂಪತ್ಯ ಜೀವನಕ್ಕೆ ವಿಚ್ಛೇದನದ ಮೂಲಕ ತೆರೆಬಿದ್ದ ಬೆನ್ನಲ್ಲೇ ನಾಗರತ್ನ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಇಷ್ಟು ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು, ಮದುವೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವಿಚ್ಛೇದನವನ್ನು ವಿರೋಧಿಸುತ್ತಾ ಬಂದಿದ್ದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯ ಇದೀಗ ಅಂತಿಮವಾಗಿ ವಿಚ್ಛೇದನ ಮಂಜೂರು ಮಾಡಿದೆ. ದೀರ್ಘಕಾಲದ ಕಾನೂನು ಹೋರಾಟದ ಉದ್ದೇಶ ಮದುವೆಯ ಹೊರಗೆ ಆಯ್ಕೆ ಮಾಡಿಕೊಂಡಿರುವ ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸುವುದಾಗಿದ್ದರೆ, ಆ ಉದ್ದೇಶ ಕೊನೆಗೂ ಈಡೇರಿದೆ ಎಂದು ನಾಗರತ್ನ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾರ್ಸಿಸಿಸ್ಟಿಕ್ ಅಬ್ಯೂಸ್‌ನಿಂದಾಗಿ ಅನುಭವಿಸಿದ ನೋವು ಹಾಗೂ ಅದರ ಪರಿಣಾಮಗಳನ್ನು ಸಹಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಯಾರಿಗೂ ಹೊರಗಿನಿಂದ ಕಾಣದ ಆಳವಾದ ಮಾನಸಿಕ ಮತ್ತು ಭಾವನಾತ್ಮಕ ನೋವಿನೊಂದಿಗೆ ಬದುಕುವುದು ಹೇಗಿರುತ್ತದೆ ಎಂಬುದು ತಮ್ಮ ಅನುಭವದಿಂದ ತಿಳಿದಿದೆ ಎಂದಿದ್ದಾರೆ.
ಒಂದು ದಿನ ತಮ್ಮ ಅನುಭವವನ್ನು ಬಹಿರಂಗವಾಗಿ ಹಂಚಿಕೊಳ್ಳಲು ಬಯಸುವುದಾಗಿ ತಿಳಿಸಿರುವ ನಾಗರತ್ನ, ಯಾರನ್ನೂ ಆರೋಪಿಸುವುದು ತಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದೇ ತಮ್ಮ ಆಶಯ ಎಂದಿದ್ದಾರೆ.
ಮಕ್ಕಳ ಭವಿಷ್ಯವೇ ತಮ್ಮ ಜೀವನದ ಮೊದಲ ಆದ್ಯತೆಯಾಗಿದ್ದು, ಈಗಲೂ ಅದೇ ಮುಂದುವರಿದಿದೆ. ಮಕ್ಕಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೋವುಗಳು ಅದಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಸದ್ಯ ಮೌನವಾಗಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಒಂದು ದಿನ ಸರಿಯಾದ ಸಮಯ ಬಂದಾಗ ತಮ್ಮ ಅನುಭವವನ್ನು ತಮ್ಮದೇ ಮಾತುಗಳಲ್ಲಿ ಹಂಚಿಕೊಳ್ಳುವುದಾಗಿ ನಾಗರತ್ನ ತಿಳಿಸಿದ್ದಾರೆ. ತಮ್ಮ ಮೂವರು ಮಕ್ಕಳು ಸದಾ ತಮ್ಮ ಶಕ್ತಿಯಾಗಿ ನಿಂತಿದ್ದಾರೆ ಎಂದು ಹೇಳಿರುವ ಅವರು, ಮಕ್ಕಳ ಮೇಲೆ ಎಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ. ವಿಜಯ್ ಕುಮಾರ್ ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸಿ, ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.



