ಬೆಂಗಳೂರು: ಕೋಟ್ಯಾಂತರ ಮೌಲ್ಯದ ಜಮೀನು ವ್ಯವಹಾರದಲ್ಲಿ ಉದ್ಯಮಿಗೆ ವಂಚನೆ ನಡೆಸಿದ ಆರೋಪದಡಿ ಪೀಟರ್ ಡ್ಯಾಡಿ ಎಂಬಾತನ ಪುಲಿಕೇಶಿನಗರ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಫೆಬ್ರವರಿ 10ರಂದು ದಾಳಿ ನಡೆಸಿದ್ದಾರೆ.
ಸುಮಾರು 300 ಎಕರೆ ಜಮೀನಿನ ದಾಖಲೆಗಳನ್ನು ಸರಿಪಡಿಸಿ ಖಾತೆ ಬದಲಾವಣೆ ಮಾಡಿ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಪೀಟರ್, ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಮತ್ತು ಕಮಿಷನ್ ಹೆಸರಿನಲ್ಲಿ ₹96.50 ಲಕ್ಷ ಹಣ ಪಡೆದಿದ್ದರೂ ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾರೆ ಎಂಬುದು ಉದ್ಯಮಿ ಸುಬ್ಬರಾವ್ ನೀಡಿದ ದೂರಿನ ಸಾರಾಂಶ.
ಈ ಕುರಿತು ಕಳೆದ ವರ್ಷದ ಆಗಸ್ಟ್‌ನಲ್ಲಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಗಮನಿಸಿ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ತನಿಖೆಯ ವೇಳೆ, ಕಮಿಷನ್ ಖಾತ್ರಿಗಾಗಿ ಪಡೆದಿದ್ದ ಚೆಕ್ ಅನ್ನು ಆಧಾರವಾಗಿ ಬಳಸಿಕೊಂಡು ದೂರುದಾರರ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಇದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.
ಸಿಐಡಿ ಅಧಿಕಾರಿಗಳು ಪೀಟರ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣೆಗಳಲ್ಲಿ ಪೀಟರ್ ವಿರುದ್ಧ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಹೊರಬಂದಿದೆ.
ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.



