ಇಸ್ಲಾಮಾಬಾದ್: ಅಮೆರಿಕಾ ಉತ್ತಮ ಸಂಬಂಧ ಹೊಂದಲು ಪಾಕಿಸ್ತಾನ ನಾಯಕರು ನಡೆಸುತ್ತಿರುವ ಪ್ರಯತ್ನಗಳ ನಡುವೆಯೇ ಪಾಕ್ ರಕ್ಷಣಾ ಸಚಿವ ಖವಾಜ ಆಸೀಫ್ ಅಮೆರಿಕಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಪಾಕಿಸ್ತಾನವನ್ನು “ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ” ಎಂದು ಅವರು ಸ್ವತಃ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜ ಆಸೀಫ್, 1999ರ ನಂತರ ಅಮೆರಿಕ ಮರು ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರ ದೇಶದ ದೊಡ್ಡ ತಪ್ಪಾಗಿತ್ತು ಎಂದು ಹೇಳಿದ್ದಾರೆ. ವಿಶೇಷವಾಗಿ ಅಫ್ಘಾನಿಸ್ತಾನ ಯುದ್ಧದ ಬಳಿಕ ಅಮೆರಿಕ ಬೆಳೆಸಿದ ಸಂಬಂಧಗಳು ಪಾಕಿಸ್ತಾನಕ್ಕೆ ಶಾಶ್ವತ ಹಾನಿ ಉಂಟುಮಾಡಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ತನ್ನ ಸ್ವಾರ್ಥದ ಲಾಭಕ್ಕಾಗಿ ಮಾತ್ರ ಇತರ ದೇಶಗಳಿಗೆ ಮಹತ್ವ ನೀಡುತ್ತದೆ ಎಂಬುದು ಜಗತ್ತಿಗೆ ತಿಳಿದ ಸಂಗತಿ ಎಂದು ಪರೋಕ್ಷವಾಗಿ ಟೀಕಿಸಿದರು. ಪಾಕಿಸ್ತಾನವು ಅಮೆರಿಕಾದೊಂದಿಗೆ ಕೈಜೋಡಿಸಿದ ಪರಿಣಾಮ ದೇಶವು ರಾಜಕೀಯ, ಆರ್ಥಿಕ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮಗಳನ್ನು ಅನುಭವಿಸಿದೆ ಎಂದರು.



