ವಿಜಯಸಾಕ್ಷಿ ಸುದ್ದಿ, ರೋಣ: ಸರಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಸೈಬರ್ ವಂಚಕರಿಂದ ಎಚ್ಚರಿಕೆಯಿಂದಿರುವುದು ಸೂಕ್ತ. ಇಲ್ಲದಿದ್ದರೆ ಇಬ್ಬರ ಮೇಲೂ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ ಹೇಳಿದರು.
ಅವರು ಬುಧವಾರ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.
ಸೈಬರ್ ವಂಚಕರು ಪರಿಚಯದವರ ಸೋಗಿನಲ್ಲಿ ಮೋಸ ಮಾಡುವ ಹೊಸ ವಿಧಾನವನ್ನು ಬಳಕೆ ಮಾಡಿಕೊಂಡಿದ್ದಾರೆ. ಕಾರಣ ನಿಮ್ಮ ಹೆಸರಿನಲ್ಲಿ ನಿಮಗೆ ಪರಿಚಯ ಇರುವ ವ್ಯಕ್ತಿಗಳ ಮೊಬೈಲ್‌ಗೆ ಲಿಂಕ್ ಕಳಿಸುತ್ತಾರೆ. ಆಗ ನಮಗೆ ಪರಿಚಯ ಇರುವ ವ್ಯಕ್ತಿ ಎಂದು ಭಾವಿಸಿ ಮೊಬೈಲ್‌ಗೆ ಬಂದಿರುವ ಲಿಂಕ್‌ನ್ನು ಒತ್ತಿದರೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ದಾಖಲೆಗಳು ಸೈಬರ್ ವಂಚಕರಿಗೆ ಲಭ್ಯವಾಗುತ್ತವೆ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ಗಜೇಂದ್ರಗಡ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಅಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯವರು ನಡೆಸಬೇಕು. ಇಲಾಖೆಯವರು ನಿಷ್ಕಾಳಜಿ ವಹಿಸದೆ ಹಸಿರೀಕರಣಕ್ಕೆ ಒಲವು ತೋರಬೇಕು. ಅತಿಕ್ರಮಣವಾದ ಅರಣ್ಯ ಇಲಾಖೆಯ ಜಾಗಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಇಲಾಖೆಗಳ ವಿರುದ್ಧ ದಾಖಲಿಸಿರುವ ದೂರಗಳ ಬಗ್ಗೆ ಇಲಾಖೆಗಳ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ತಹಸೀಲ್ದಾರ ನಾಗರಾಜ ಕೆ, ತಾ.ಪಂ ಇಒ ಚಂದ್ರಶೇಖರ ಖಂದಕೂರ, ಬಿಇಒ ಎ.ಎನ್. ಕಂಬೋಗಿ, ಪಿಎಸ್‌ಐ ಪ್ರಕಾಶ ಬಣಕಾರ, ಕೃಷಿ ಅಧಿಕಾರಿ ಎಸ್.ಎಫ್. ತಹಸೀಲ್ದಾರ, ಜೆ.ಟಿ. ಕೊಪ್ಪದ, ಆರ್.ಎಲ್. ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಲೋಕಾಯುಕ್ತ ಪಿಎಸ್‌ಐ ಎಸ್.ಎಚ್. ತೇಲಿ ಮಾತನಾಡಿ, ಸರಕಾರಿ ಕೆಲಸಕ್ಕೆ ಬರುವ ಸಾರ್ವಜನಿಕರನ್ನು ಸುಖಾಸುಮ್ಮನೆ ತಿರುಗಾಡಿಸಬೇಡಿ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದು ಸರಕಾರಿ ನೌಕರರ ಆದ್ಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು ಎಂದರು.



