ನೆಲಮಂಗಲ: ಕೆನಡಾ ದೇಶದ ಟೊರೊಂಟೊ ನಗರದಲ್ಲಿ ಫೆಬ್ರವರಿ 7ರಂದು ನಡೆದ ಶೂಟೌಟ್ನಲ್ಲಿ ಹತ್ಯೆಗೀಡಾದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ನಡೆದ ಪ್ರಯತ್ನ ಫಲಕಾರಿಯಾಗಿದ್ದು, ಕುಟುಂಬಕ್ಕೆ ಸಮಾಧಾನ ತಂದಿದೆ.
ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇ-ಮೇಲ್ ಮೂಲಕ ಮಾಹಿತಿ ನೀಡಿರುವಂತೆ, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಫೆಬ್ರವರಿ 14ರಂದು ಟೊರಾಂಟೋದಿಂದ ಹೊರಟು, ನವದೆಹಲಿಯ ಮೂಲಕ ಫೆಬ್ರವರಿ 16ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಂಗಳೂರಿಗೆ ತಲುಪಲಿದೆ.
“ನೂರ್ಕಾಲ ಬಾಳಿ ಬದುಕಬೇಕಾದ ಮಗನನ್ನು ಕಳೆದುಕೊಂಡ ಹೆತ್ತವರಿಗೆ ಜೀವವನ್ನು ವಾಪಸ್ ತಂದುಕೊಡುವ ಶಕ್ತಿ ನಮಗಿಲ್ಲ. ಆದರೆ, ಅಂತಿಮ ದರ್ಶನ ಪಡೆದು ತಮ್ಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತ್ಯಕ್ರಿಯೆ ನಡೆಸುವ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ” ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅವರು ಕುಟುಂಬದ ಪರವಾಗಿ ಹಾಗೂ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.



