ಬೀದರ್: ಮನೆಯ ಮುಂದೆ ಆಟ ಆಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬೀದರ್ ತಾಲೂಕಿನ ಮಲ್ಲಿಕ್‌ಮರ್ಜಾಪುರ ಗ್ರಾಮದಲ್ಲಿ ಸಂಭವಿಸಿದೆ.
5 ವರ್ಷದ ಅವಿನಾಶ್ ಮೃತ ಬಾಲಕ. ಆಟವಾಡುವ ವೇಳೆ ಮನೆಯ ಮುಂದಿನ ಚರಂಡಿ ಕಾಲುವೆಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಎಂದಿನಂತೆ ಶಾಲೆ ಮುಗಿಸಿಕೊಂಡು ಬಂದಿದ್ದ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಶುಕ್ರವಾರ ಸಂಜೆ 6 ಗಂಟೆಯಿಂದ ಬಾಲಕ ಕಾಣೆಯಾಗಿದ್ದು ಆತನಿಗಾಗಿ ಕುಟುಂಬಸ್ಥರು ಹುಡುಕಾಡುತ್ತಿದ್ದರು. ಆದರೆ ಎಲ್ಲೂ ಬಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಮನೆಯ ಮುಂದಿನ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿರುವುದು ಗೊತ್ತಾಗಿದೆ. ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



