ವಿಜಯಸಾಕ್ಷಿ ಸುದ್ದಿ, ಗದಗ: ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿ-ಎನ್ಟಿಟಿಎಫ್ ಸಹಯೋಗದಲ್ಲಿ 2026ನೇ ಸಾಲಿನ ‘ಗಣಿತ ಬಾಲ ಭಾಸ್ಕರ’ ರಸಪ್ರಶ್ನೆ ಸ್ಪರ್ಧೆಯು ಜುಲೈ 18ರಿಂದ ಆರಂಭವಾಗಲಿದ್ದು, ಜಿಲ್ಲೆಯ 140ಕ್ಕೂ ಹೆಚ್ಚು ಶಾಲೆಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಚ್.ಕೆ. ಪಾಟೀಲ ಪ್ರತಿಷ್ಠಾನದ ಸದಸ್ಯ ಆನಂದ ಪೊತ್ನಿಸ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದರು.
ಜುಲೈ 18ರಂದು ಮೊದಲ ಹಂತದ ಲಿಖಿತ ಪರೀಕ್ಷೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ನಡೆಯಲಿದೆ. ಜುಲೈ 25ರಂದು ಜಿ-ಎನ್ಟಿಟಿಎಫ್ನಲ್ಲಿ ಎರಡನೇ ಹಂತದ ಲಿಖಿತ ಪರೀಕ್ಷೆ ಜರುಗಲಿದ್ದು, ಮೊದಲ ಹಂತದಿಂದ ಆಯ್ಕೆಯಾಗುವ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಹಂತ ಆಗಸ್ಟ್ 8ರಂದು ನಡೆಯಲಿದ್ದು, 60 ರಿಂದ 70 ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹5 ಸಾವಿರ, ದ್ವಿತೀಯ ಬಹುಮಾನ ₹3 ಸಾವಿರ ಹಾಗೂ ತೃತೀಯ ಬಹುಮಾನ ₹2 ಸಾವಿರ ನಗದು ನೀಡಲಾಗುವುದು. ಸಮಾಧಾನಕರ ಬಹುಮಾನವಾಗಿ ₹1 ಸಾವಿರ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುವುದು ಎಂದರು.
ಕಳೆದ ವರ್ಷ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಬಾರಿ 10ನೇ ತರಗತಿ ವಿದ್ಯಾರ್ಥಿಗಳನ್ನೂ ಸೇರಿಸಿ ಸ್ಪರ್ಧೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.
ಕೃಷ್ಣೇಗೌಡ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿಜ್ಞಾನ ರಸಪ್ರಶ್ನೆಯನ್ನೂ ನಡೆಸುವ ಯೋಜನೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಬಂಗಾರಶೆಟ್ಟರ್, ಏಕನಾಥ ನಾಗನೂರ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



