ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಭಾನುವಾರ 33ನೇ ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ಇತರ ಪ್ರಮುಖ ಗಣ್ಯರೂ ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ, ಸದ್ಗುರು ಯೋಗೇಶ್ವರ ಲಿಂಗ ಮಹಾ ಅಭಿಷೇಕವನ್ನು ಕೈಗೊಳ್ಳಲಿದ್ದಾರೆ.
ಅಭಿಷೇಕದ ನಂತರ ಸಂಗೀತ ಮತ್ತು ಧ್ಯಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಭವ್ಯ ಮೆರವಣಿಗೆಯಾದ ಲಿಂಗ ಭೈರವಿ ಮಹಾಯಾತ್ರೆ ನಡೆಯಲಿದೆ. ಪ್ರಮುಖ ಆಕರ್ಷಣೆ ಎಂದರೆ ಆದಿಯೋಗಿ ದಿವ್ಯ ದರ್ಶನಂ, 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಬೆಳಕು ಮತ್ತು ಧ್ವನಿ ಪ್ರದರ್ಶನವು ನಡೆಯಲಿದೆ.
ಕಾರ್ಯಕ್ರಮವು 23 ಭಾಷೆಗಳಲ್ಲಿ ಪ್ರಸಾರವಾಗಿದ್ದು, 100ಕ್ಕೂ ಹೆಚ್ಚು ಟಿವಿ ಚಾನೆಲ್ ಮತ್ತು ಡಿಜಿಟಲ್ ಸ್ಟ್ರೀಮ್‌ನಲ್ಲಿ ಲಭ್ಯವಾಗಲಿದೆ. ವಿಶ್ವಾದ್ಯಂತ 1.4 ಕೋಟಿ ವೀಕ್ಷಕರು ಇದನ್ನು ವೀಕ್ಷಿಸಬಹುದು.



