ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಚೇರಿಯನ್ನು ಆರ್.ಟಿ. ನಗರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಅರುಮೋಘಮ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಮೌಲ್ಯಾಧಾರಿತ ರಾಜಕೀಯದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಬದ್ಧವಾಗಿದೆ ಎಂದು ಹೇಳಿದರು.
ಸಂವಿಧಾನಿಕ ಸಂಸ್ಥೆಗಳು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸದ ಹಿನ್ನೆಲೆ ಜನರ ಜವಾಬ್ದಾರಿ ಹೆಚ್ಚಾಗಿದೆ. ಜನಸಾಮಾನ್ಯರು ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ದುರ್ಬಲ ವರ್ಗಗಳು ಮತ್ತು ಮಹಿಳೆಯರ ಭದ್ರತೆ ಕುಂಠಿತಗೊಂಡಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರ ಗಂಭೀರ ವಿಷಯವಾಗಿದೆ. ಈ ಕುರಿತು ಜನಜಾಗೃತಿ ಮೂಡಿಸಿ, ಮೌಲ್ಯಾಧಾರಿತ ನಾಯಕತ್ವವನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾದ ವಕೀಲ ತಾಹಿರ್ ಹುಸೇನ್ ಮಾತನಾಡಿ, ರಾಜ್ಯದಲ್ಲಿ ದಲಿತ, ಶೋಷಿತ, ದಮನಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪರ ಪಕ್ಷವು ನಿರಂತರ ಹೋರಾಟ ನಡೆಸಲಿದೆ. ರಾಜ್ಯದಲ್ಲಿ ಕೋಮು ವೈಮನಸ್ಸು ಸೃಷ್ಟಿಸುವ ಪ್ರಯತ್ನಗಳನ್ನು ಸರ್ಕಾರ ತಕ್ಷಣ ತಡೆಹಿಡಿಯಬೇಕು. ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು ಹಾಗೂ ಶೋಷಿತ ಸಮುದಾಯಪರ ಬಜೆಟ್ ಮಂಡನೆ ಮಾಡುವಂತೆ ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ ಪಕ್ಷದ ರಾಜ್ಯಾಧ್ಯಕ್ಷ ಆರ್. ಮೋಹನ್, ಪಕ್ಷದ ಮುಖಂಡರಾದ ಹಬೀಬುಲ್ಲ ಖಾನ್, ರಿಯಾಜ್ ಅಹಮದ್, ತಾಜುದ್ದೀನ್ ಇಲಕಲ್, ಉದ್ಯಮಿ ಜವಾದ್ ಮೊಹಮ್ಮದ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.



