HomeKarnataka Newsಕರ್ನಾಟಕದಲ್ಲಿ 56 ಸಾವಿರಕ್ಕೂ ಹೆಚ್ಚು ಮಂದಿಗೆ ತಮಗೇ ತಿಳಿಯದೆ HIV ಸೋಂಕು: ಪತ್ತೆಗಾಗಿ ಆರೋಗ್ಯ ಇಲಾಖೆಯ...

ಕರ್ನಾಟಕದಲ್ಲಿ 56 ಸಾವಿರಕ್ಕೂ ಹೆಚ್ಚು ಮಂದಿಗೆ ತಮಗೇ ತಿಳಿಯದೆ HIV ಸೋಂಕು: ಪತ್ತೆಗಾಗಿ ಆರೋಗ್ಯ ಇಲಾಖೆಯ ವಿಶೇಷ ಅಭಿಯಾನ

For Dai;y Updates Join Our whatsapp Group

ಬೆಂಗಳೂರು: ರಾಜ್ಯದಲ್ಲಿ ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣದ ಗುರಿಯೊಂದಿಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್) ಹಮ್ಮಿಕೊಂಡಿರುವ ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ’ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಹೆಚ್‌ಐವಿ ಸೋಂಕಿತರನ್ನು ಗುರುತಿಸಿ, ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವ ಮೂಲಕ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಜೂನ್ 28, 2026ರವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 2,05,350 ಮಂದಿ ಹೆಚ್‌ಐವಿ ಸೋಂಕಿತರು ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದರೆ, ಸುಮಾರು 56,406 ಮಂದಿ ತಮ್ಮ ಹೆಚ್‌ಐವಿ ಸೋಂಕಿನ ಬಗ್ಗೆ ಅರಿವಿಲ್ಲದೆ ಇರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ. ಇಂತಹವರನ್ನು ಪತ್ತೆಹಚ್ಚಿ ಚಿಕಿತ್ಸೆ ವ್ಯಾಪ್ತಿಗೆ ತರುವುದು ಅಭಿಯಾನದ ಪ್ರಮುಖ ಗುರಿಯಾಗಿದೆ.

ಸಮಾಜದಲ್ಲಿ ಹೆಚ್‌ಐವಿ ಸೋಂಕಿತರ ಬಗ್ಗೆ ಇರುವ ತಾರತಮ್ಯ ಹಾಗೂ ಕೀಳರಿಮೆಯ ಮನೋಭಾವವನ್ನು ನಿವಾರಿಸುವ ಉದ್ದೇಶದಿಂದ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಎಂಬ ಸಂದೇಶದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಯಂಪ್ರೇರಿತ ಹಾಗೂ ಸಂಪೂರ್ಣ ಗೌಪ್ಯತೆಯೊಂದಿಗೆ ಹೆಚ್‌ಐವಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಂಸ್ಥೆ ಕರೆ ನೀಡಿದೆ.

ಹೆಚ್‌ಐವಿಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಕೆಎಸ್‌ಎಪಿಎಸ್ ತಿಳಿಸಿದೆ. ಇದೇ ವೇಳೆ ‘ಪತ್ತೆಯಾಗದಿದ್ದರೆ = ಹರಡುವುದಿಲ್ಲ (Undetectable = Untransmittable – U=U)’ ಎಂಬ ವೈಜ್ಞಾನಿಕ ಸಂದೇಶಕ್ಕೂ ಅಭಿಯಾನದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಅದರಂತೆ, ಹೆಚ್‌ಐವಿ ಸೋಂಕಿತರು ನಿಯಮಿತವಾಗಿ ಎಆರ್‌ಟಿ ಚಿಕಿತ್ಸೆ ಪಡೆದು ವೈರಸ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಅವರಿಂದ ಲೈಂಗಿಕ ಸಂಗಾತಿಗೆ ಸೋಂಕು ಹರಡುವುದಿಲ್ಲ. ಇದರಿಂದ ಸೋಂಕಿತರು ದೀರ್ಘಕಾಲ ಆರೋಗ್ಯಕರ ಹಾಗೂ ಉತ್ಪಾದಕ ಜೀವನ ನಡೆಸಬಹುದು ಎಂದು ಸಂಸ್ಥೆ ವಿವರಿಸಿದೆ.

ಅಭಿಯಾನದ ಭಾಗವಾಗಿ ‘ಬ್ರೇಕ್‌ಫ್ರೀ ಕ್ಯೂಆರ್ ಕೋಡ್’ ಅನ್ನು ಪರಿಚಯಿಸಲಾಗಿದ್ದು, ಸಾರ್ವಜನಿಕರು ಇದನ್ನು ಸ್ಕ್ಯಾನ್ ಮಾಡುವ ಮೂಲಕ ಹೆಚ್‌ಐವಿ ಅಪಾಯದ ಕುರಿತು ಮಾಹಿತಿ ಪಡೆಯಬಹುದು. ಜೊತೆಗೆ ಗೌಪ್ಯ ಆಪ್ತ ಸಮಾಲೋಚನೆ ಹಾಗೂ ತಪಾಸಣಾ ಕೇಂದ್ರಗಳ ಮಾಹಿತಿಯನ್ನೂ ಸುಲಭವಾಗಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬ ವಯಸ್ಕರೂ ತಮ್ಮ ಹೆಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಗರ್ಭಿಣಿಯರು ಕಡ್ಡಾಯವಾಗಿ ಹೆಚ್‌ಐವಿ ಹಾಗೂ ಸಿಫಿಲಿಸ್ ತಪಾಸಣೆಗೆ ಒಳಗಾಗಬೇಕು. ಲೈಂಗಿಕ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img