ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿನ ದಂತ ಭಗ್ನಗೊಂಡಿರುವ ಘಟನೆ ನಡೆದಿದೆ.
ಸರಗೂರು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಕ್ಯಾಂಪ್‌ನಲ್ಲಿ ಮರದ ದಿಮ್ಮಿ ಸಾಗಿಸುವ ಸಂದರ್ಭದಲ್ಲಿ ಅಭಿಮನ್ಯುವಿನ ಎಡಭಾಗದ ದಂತ ಕಠಿಣ ವಸ್ತುವಿಗೆ ಬಡಿದಿದೆ. ಪರಿಣಾಮ ದಂತದ ತುದಿ ಮುರಿದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಸ್ಥಳದಲ್ಲೇ ಪಶುವೈದ್ಯರು ಅಭಿಮನ್ಯುವಿನ ದಂತವನ್ನು ಪರಿಶೀಲಿಸಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮತ್ತಿಗೋಡು ಆನೆ ಶಿಬಿರದಲ್ಲಿರುವ ಅಭಿಮನ್ಯು ಆರೋಗ್ಯವಾಗಿದ್ದು, ಎಂದಿನಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಅಂಬಾರಿ ಆನೆ ಅಭಿಮನ್ಯುವಿನ ದಂತದ ತುದಿ ಭಗ್ನಗೊಂಡಿದ್ದರೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಅರಣ್ಯ ಇಲಾಖೆಯ ಸಮಾಧಾನಕರ ಮಾಹಿತಿ.
ಇದೇ ನಡುವೆ ಈ ವರ್ಷದ ದಸರಾ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯುವಿಗೆ ಕೊನೆಯದಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಆರಂಭವಾಗಿದೆ. ಮುಂದಿನ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿ ಮಹೇಂದ್ರ ಅಥವಾ ಧನಂಜಯ ಆನೆಗಳ ಹೆಗಲಿಗೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.



