ನವದೆಹಲಿ: ದೆಹಲಿಯ ಲೋಧಿ ಕಾಲೋನಿಯಲ್ಲಿ ಮದುವೆಯಾಗಿ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
28 ವರ್ಷದ ಆಕೃತಿ ಎಂಬ ಯುವತಿಯ ಮೃತದೇಹ ಪಾಲಿಕಾ ಕುಂಜ್ನ ಎನ್ಡಿಎಂಸಿ ಫ್ಲಾಟ್ಗಳ ಕಟ್ಟಡದ ಹೊರಭಾಗದಲ್ಲಿ ಪತ್ತೆಯಾಗಿದೆ.
ಮಾಹಿತಿಯ ಪ್ರಕಾರ, ಆಕೃತಿ ಎಷ್ಟನೇ ಮಹಡಿಯಿಂದ ಬಿದ್ದಿದ್ದಾಳೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಆಕೃತಿ ಏಪ್ರಿಲ್ 24 ರಂದು ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ಛತ್ತರ್ಪುರದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಆಕೆ, ಮದುವೆಯ ನಂತರ ಪತಿ ಹಾಗೂ ಅತ್ತೆ-ಮಾವರಿಂದ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆಕೃತಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದು, ಆಕೆಯ ಸಹೋದರ ಮಾತನಾಡಿ “ಆಕೃತಿ ಮಾನಸಿಕವಾಗಿ ಧೈರ್ಯವಂತಳು, ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವವಿಲ್ಲ. ಇದು ಪೂರ್ವನಿಯೋಜಿತ ಕೊಲೆ” ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಭಾರತ್ ನ್ಯಾಯ ಸಂಹಿತೆಯ ಸೆಕ್ಷನ್ 196 ಅಡಿಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ವಿಚಾರಣೆ ಮುಂದುವರಿದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.



