ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೇಲಿನ ಶೇ.50 ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಜೂನ್ 21ರಿಂದ ಜುಲೈ 4ರವರೆಗೆ ಕೇವಲ 14 ದಿನಗಳಲ್ಲಿ ₹18,15,42,200 ದಂಡದ ಮೊತ್ತ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಸಂಚಾರ ಪೊಲೀಸರು, ಜೂನ್ 4ರಂದು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಇ-ಚಲನ್ನಲ್ಲಿ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ.50 ರಿಯಾಯಿತಿ ಘೋಷಿಸಿತ್ತು. ಈ ಆದೇಶ ಜೂನ್ 21ರಿಂದ ಜಾರಿಗೆ ಬಂದಿತ್ತು ಎಂದು ತಿಳಿಸಿದ್ದಾರೆ.
ರಿಯಾಯಿತಿ ಯೋಜನೆಯಡಿ ಜೂನ್ 21ರಿಂದ ಜುಲೈ 4ರವರೆಗೆ ವಿವಿಧ ಮಾಧ್ಯಮಗಳ ಮೂಲಕ 6,06,032 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹18.15 ಕೋಟಿ ದಂಡ ವಸೂಲಿಯಾಗಿದೆ.
ವಾಹನ ಸವಾರರು ಈ ರಿಯಾಯಿತಿಯ ಪ್ರಯೋಜನ ಪಡೆಯಲು ಜುಲೈ 10ರವರೆಗೆ ಅವಕಾಶವಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ಸಂಚಾರ ಜಂಕ್ಷನ್ಗಳಲ್ಲಿ ಪಿಎಸ್ಐ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.



