ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿರುವ ತುಂಗಭದ್ರಾ ನದಿ ತೀರದ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ರಾತ್ರೋರಾತ್ರಿ ಶಿವಲಿಂಗ ಹಾಗೂ ನಂದಿ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಶಿವರಾತ್ರಿಯ ದಿನವೇ ಶಿವಲಿಂಗದ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ದೇವಸ್ಥಾನದ ಸಮೀಪದಲ್ಲಿರುವ ಹೊನ್ನತ್ತೆಮ್ಮನ ಮೂರ್ತಿಗಳನ್ನೂ ಸಹ ದುಷ್ಕರ್ಮಿಗಳು ಹಾನಿಗೊಳಿಸಿರುವುದು ತಿಳಿದುಬಂದಿದೆ.
ಶನಿವಾರ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ಸುಣ್ಣ, ಬಣ್ಣ ಬಳಿದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮುಂಜಾನೆ ಪೂಜೆಗಾಗಿ ತೆರಳಿದಾಗ ಮೂರ್ತಿಗಳು ಭಗ್ನಗೊಂಡಿರುವುದನ್ನು ಕಂಡು ಭಕ್ತರು ತೀವ್ರ ಆಘಾತ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ಅಧಿಕಾರಿಗಳು ತಡವಾಗಿ ಬಾರದಿರುವುದಕ್ಕೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಕ್ರಮ ಜರುಗಿಸಿ ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.



