ಬೆಂಗಳೂರು: ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಮಹಿಳೆಯನ್ನು ಆಕೆಯ ಎರಡನೇ ಪತಿಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು 34 ವರ್ಷದ ಸುಜಾತಾ ಎಂದು ಗುರುತಿಸಲಾಗಿದೆ. ಆಕೆಯ ಎರಡನೇ ಪತಿ 24 ವರ್ಷದ ಫಯಾಜ್ ಪಾಷಾ ಕೊಲೆ ಆರೋಪ ಎದುರಿಸುತ್ತಿದ್ದಾನೆ. ಸುಜಾತಾಳ ಮೊದಲ ಪತಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ತನಗಿಂತ ಹತ್ತು ವರ್ಷ ಚಿಕ್ಕವನಾದ ಫಯಾಜ್ ಪಾಷಾ ಜೊತೆ ಪರಿಚಯ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಸುಮಾರು ಐದು ತಿಂಗಳ ಹಿಂದಷ್ಟೇ ಇಬ್ಬರೂ ವಿವಾಹವಾಗಿದ್ದರು ಎನ್ನಲಾಗಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಆರಂಭವಾದ ಜಗಳ
ಮದುವೆಯಾದ ಬಳಿಕ ಸುಜಾತಾಳ ನಡತೆ ಹಾಗೂ ಬೇರೊಬ್ಬರೊಂದಿಗಿನ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಫಯಾಜ್, ಪದೇಪದೇ ಆಕೆಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಬೇಸತ್ತು ಆತ ಮನೆ ಬಿಟ್ಟು ಹೋಗಿದ್ದ. ಬಳಿಕ ಸುಜಾತಾ ಮತ್ತೆ ಆತನನ್ನು ಮನೆಗೆ ಕರೆಸಿಕೊಂಡು, ಇನ್ನು ಮುಂದೆ ಚೆನ್ನಾಗಿ ಬದುಕೋಣ ಎಂದು ಮನವೊಲಿಸಿದ್ದಳು ಎನ್ನಲಾಗಿದೆ.
ಆದರೆ, ಮನೆಗೆ ಮರಳಿದ ಬಳಿಕವೂ ದಂಪತಿಯ ನಡುವಿನ ಕಲಹ ಮುಂದುವರಿದಿತ್ತು. ಎರಡು ತಿಂಗಳ ಹಿಂದೆ ಇದೇ ವಿಚಾರಕ್ಕೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಫಯಾಜ್ ಪಾಷಾ ಪಾರ್ಕ್ ಸಮೀಪ ಸುಜಾತಾಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ನಿರ್ಜನ ಪ್ರದೇಶದಲ್ಲಿ ಮೃತದೇಹ ಬಚ್ಚಿಟ್ಟು ಪರಾರಿ
ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಸುಜಾತಾಳ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ನವೆಂಬರ್ 6ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿ, ಮೃತದೇಹದ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ವೇಳೆ ಸುಜಾತಾಳ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್ ಪಾಷಾನನ್ನು ಬಂಧಿಸಿರುವ ಕೊಡಿಗೆಹಳ್ಳಿ ಪೊಲೀಸರು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.









