ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದ ಕನ್ನಡಿಗ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಸಾಕೇತ್ ಪೋಷಕರು ಅಮೆರಿಕಗೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಮೂಲದ 22 ವರ್ಷದ ಸಾಕೇತ್, ಐಐಟಿ ಮದ್ರಾಸ್ನಲ್ಲಿ ಪದವಿ ಪಡೆದ ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ರಾಸಾಯನಿಕ ಹಾಗೂ ಜೈವಿಕ ಆಣ್ವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಸಾಕೇತ್ ಅವರಿಗಾಗಿ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದರು.
ಸಾಕೇತ್ ಕಾಣೆಯಾಗಿದ್ದ ಬಳಿಕ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿಯ ಮನೆಯ ಸಮೀಪ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಅಲ್ಲದೆ ಲೇಕ್ ಅಂಜಾ ಹಾಗೂ ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿತ್ತು. ಇದೀಗ ಸಾಕೇತ್ ಮೃತದೇಹ ಪತ್ತೆಯಾಗಿರುವುದನ್ನು ಭಾರತೀಯ ರಾಯಭಾರಿ ಕಚೇರಿ, ಸ್ಯಾನ್ ಫ್ರಾನ್ಸಿಸ್ಕೋ ದೃಢಪಡಿಸಿದೆ.
ಮಗನ ಗುರುತು ಪತ್ತೆ ಹಾಗೂ ಮುಂದಿನ ಪ್ರಕ್ರಿಯೆಗಾಗಿ ಕುಟುಂಬಸ್ಥರು ಕ್ಯಾಲಿಫೋರ್ನಿಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರಿನ ನಾಗರಬಾವಿ ನಿವಾಸಿಯಾದ ಸಾಕೇತ್ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಮಗನ ಸಾವಿನ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.



