ಮಧ್ಯಪ್ರದೇಶ: ಕಳೆದ ವರ್ಷ ಭಾರೀ ಮಳೆಗೆ ಭಾಗಶಃ ಕೊಚ್ಚಿಹೋಗಿದ್ದ ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತಡರಾತ್ರಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ರಾಹ್ಲಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾಗಿದ್ದು, ತೆಂಡುಖೇಡಾದಿಂದ ಝಾಪನ್ ಕಡೆಗೆ ಪ್ರಯಾಣಿಸುತ್ತಿದ್ದರು. ಝಾಪನ್ ಸಮೀಪ ಬೈರ್ಮಾ ನದಿ ಮೇಲೆ ನಿರ್ಮಿಸಲಾದ ಸೇತುವೆ ಕಳೆದ ವರ್ಷದ ಮಳೆಯ ವೇಳೆ ತೀವ್ರವಾಗಿ ಹಾನಿಗೊಂಡು, ಅದರ ಒಂದು ಭಾಗ ಸಂಪೂರ್ಣವಾಗಿ ಕುಸಿದಿತ್ತು. ಆದರೆ ಸೇತುವೆ ಅಪಾಯಕಾರಿಯಾಗಿದೆ ಎಂಬುದನ್ನು ಸೂಚಿಸಲು ಯಾವುದೇ ಎಚ್ಚರಿಕೆ ಫಲಕಗಳು ಅಥವಾ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗಿರಲಿಲ್ಲ. ಕತ್ತಲಿನಲ್ಲಿ ಸೇತುವೆ ಮುರಿದಿರುವುದನ್ನು ಅರಿಯದ ಯುವಕರು ವೇಗವಾಗಿ ಸಾಗಿದ ಪರಿಣಾಮ, ಬೈಕ್ ನೇರವಾಗಿ ಕುಸಿದ ಭಾಗಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ.
ಡಿಕ್ಕಿಯ ತೀವ್ರತೆಗೆ ಮೋಟಾರ್ಸೈಕಲ್ ಸೇತುವೆಯ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 21 ವರ್ಷದ ಅಜಯ್ ಘೋಸಿ, 21 ವರ್ಷದ ಅಮಿತ್ ಕುರ್ಮಿ ಮತ್ತು 22 ವರ್ಷದ ಪವನ್ ಕುರ್ಮಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಕೆಲ ಸಮಯದವರೆಗೆ ಯಾರಿಗೂ ಘಟನೆ ಗಮನಕ್ಕೆ ಬರದೇ ಇದ್ದುದರಿಂದ ರಕ್ಷಣೆಗೆ ಅವಕಾಶವೇ ಸಿಗಲಿಲ್ಲ ಎಂದು ವರದಿಯಾಗಿದೆ.
ಈ ದುರ್ಘಟನೆಯು ಆಡಳಿತ ವ್ಯವಸ್ಥೆಯ ಗಂಭೀರ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.
ಕಳೆದ ವರ್ಷದಿಂದಲೇ ಹಾನಿಗೊಂಡಿದ್ದ ಸೇತುವೆಯನ್ನು ಮುಚ್ಚದೆ ಇರುವುದು, ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.



