ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಇಂದು ಸಿಐಡಿ ತಂಡ 42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.
ಕೋರಮಂಗಲದಲ್ಲಿರುವ ನ್ಯಾಯಾಲಯದಲ್ಲಿ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದ್ದು, ವಿಚಾರಣೆ ಬಳಿಕ ನ್ಯಾಯಾಧೀಶರು ಅವರಿಗೆ ಸಿಐಡಿ ಕಸ್ಟಡಿ ನೀಡುವಂತೆ ಆದೇಶಿಸಿದರು. ಬೈರತಿ ಬಸವರಾಜ್ ಅವರ ವೈದ್ಯಕೀಯ ವರದಿ ನಾರ್ಮಲ್ ಆಗಿರುವ ಹಿನ್ನೆಲೆಯಲ್ಲಿ ಎಸ್ಪಿಪಿ 9 ದಿನಗಳ ಕಸ್ಟಡಿಗೆ ಮನವಿ ಸಲ್ಲಿಸಿದರು. ಇದಕ್ಕೆ ಅವರ ಪರ ವಕೀಲರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.
ವಾದ-ವಿವಾದ ಆಲಿಸಿದ ನ್ಯಾಯಾಧೀಶರು 7 ದಿನಗಳ ಸಿಐಡಿ ಕಸ್ಟಡಿಗೆ ಆದೇಶ ನೀಡಿದ್ದು, ಫೆಬ್ರವರಿ 21ರವರೆಗೆ ಕಸ್ಟಡಿ ಮುಂದುವರಿಯಲಿದೆ. ಬಂಧನದ ಬಳಿಕ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಹೃದಯ ಸಂಬಂಧಿತ ಸಮಸ್ಯೆ ಇರುವುದಾಗಿ ಪತ್ತೆಯಾಗಿದೆ. ಹೀಗಾಗಿ ಹೆಚ್ಚಿನ ತಪಾಸಣೆಗೆ ಬೌರಿಂಗ್ ಆಸ್ಪತ್ರೆ ವೈದ್ಯರು ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು ಎಂದು ಎಸ್ಪಿಪಿ ಅಶೋಕ್ ನಾಯ್ಕ್ ತಿಳಿಸಿದ್ದಾರೆ. ಈ ವರದಿಯ ಆಧಾರದಲ್ಲಿ ಚಿಕಿತ್ಸೆ ಬಗ್ಗೆ ನ್ಯಾಯಾಧೀಶರು ಸೂಚನೆ ನೀಡಿದ್ದು, ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಆಹಾರದ ಕುರಿತು ಮನವಿ ಮಾಡಲಾಗಿದ್ದು, ಜಯದೇವ ಆಸ್ಪತ್ರೆಯ ಚಾರ್ಟ್ ಪ್ರಕಾರ ಊಟದ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆದರೆ ವಿಶೇಷ ಊಟ ಅಥವಾ ಮನೆ ಊಟಕ್ಕೆ ಸಂಬಂಧಿಸಿದ ಮನವಿಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್ಪಿಪಿ ಮಾಹಿತಿ ನೀಡಿದ್ದಾರೆ.



