ನೆಲಮಂಗಲ:- ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ಜರುಗಿದೆ.
3 ವರ್ಷದ ಲಕ್ಷ್ಮೀರ್ ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.
ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.



